kkcci logo 
ಕಲಬುರಗಿ

ಕೆಕೆಸಿಸಿಐಗೆ ಆರು ದಶಕದ ಸಂಭ್ರಮ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವ್ಯಾಪಾರ, ಕೈಗಾರಿಕೆ ಹಾಗೂ ಉದ್ಯಮಿಗಳ ಹಿತಾಸಕ್ತಿ ಕಾಪಾಡುತ್ತ, ಸಮಗ್ರ ಪ್ರಾದೇಶಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಲ್ಯಾಣ ಕರ್ನಾಟಕ ಕೈಗಾರಿಕಾ, ವಾಣಿಜ್ಯ ಸಂಸ್ಥೆಯೂ ಯಶಸ್ವಿಯಾಗಿ ಆರು ದಶಕ ಪೂರ್ಣಗೊಳಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
1966ರ ಜ.17ರಂದು ಸಂಸ್ಥೆ ಸ್ಥಾಪನೆಯಾಗಿದ್ದು, ಸಂಸ್ಥೆಯನ್ನು ಸ್ಥಾಪಿಸಿದ ದೂರದೃಷ್ಟಿಯ ಎಲ್ಲ ಸ್ಥಾಪಕರನ್ನು ಸ್ಮರಿಸಿದ್ದಾರೆ. ಸಂಸ್ಥೆ ದಿನೇ ದಿನೆ ಬೆಳವಣಿಗೆ ಕಂಡಿದ್ದು, ಪ್ರಸ್ತುತ ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ ಬಲಿಷ್ಠ ಸಂಸ್ಥೆಯಾಗಿ ಹೊರಹೊಮ್ಮಿ, ಪ್ರಮುಖ ವಾಣಿಜ್ಯ ಮಂಡಳಿಗಳಲ್ಲಿ ಒಂದಾಗಿದೆ ಎಂದು ಪ್ರಕಟಣೆಯಲ್ಲಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳ ಹಿತ, ತೆರಿಗೆ, ವಿದ್ಯುತ್​, ಮೂಲಸೌಕರ್ಯ, ಬ್ಯಾಂಕಿಂಗ್​ ಸೇರಿ ಹಲವು ಸಮಸ್ಯೆ, ಸವಾಲುಗಳಿಗೆ ಧ್ವನಿಯಾಗುವ ಜತೆಗೆ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಪ್ರಗತಿಗೂ ಸಂಸ್ಥೆ ನಿರಂತರವಾಗಿ ಹೋರಾಟ ಮಾಡುತ್ತಿದೆ. 371 (ಜೆ) ಅನುಷ್ಠಾನ, ಜಯದೇವ ಹೃದ್ರೋಗ ಸಂಸ್ಥೆ, ಟೆಕ್ಸ್​ಟೈಲ್​ ಪಾರ್ಕ್​ ಸೇರಿ ಹಲವು ಯೋಜನೆಗೆ ಹೋರಾಟ ರೂಪಿಸಿದ್ದು, ಸಂಸ್ಥೆ. ಈ ಭಾಗಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದೆ. ಭವಿಷ್ಯದಲ್ಲಿ ಸಂಸ್ಥೆಯಿಂದ ಉದ್ಯಮ ಪ್ರದರ್ಶನ ಮತ್ತು ತರಬೇತಿ ಕೇಂದ್ರ ಸ್ಥಾಪನೆಯಂತ ಯೋಜನೆಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.