ಕಲಬುರಗಿ: ಬಸ್ ಹತ್ತುವಾಗ ಗದ್ದಲ ಸೃಷ್ಟಿಸಿ, ಮಹಿಳೆಯರ ಮೈಮೇಲಿನ, ವ್ಯಾನಿಟಿ ಬ್ಯಾಗ್ನಲ್ಲಿನ ಆಭರಣ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳಿಯರನ್ನು ಸೇಡಂ ಮತ್ತು ಶಹಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಬಾಪುನಗರದ ನಿವಾಸಿ ಚಿಮ್ಮನ ಅನೀಲ ಕಾಂಬಳೆ(52), ಶಶಿಕಲಾ ಶಖಾ ಉಪಾದ್ಯ(60)ಮತ್ತು ಮಾಧುರಿ ಜಾಕಿ ಸಕಟ್ಟ(40) ಬಂಧಿತರು. ಇವರಿಂದ ಮೂರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸದಂತೆ 11.5 ಲಕ್ಷ ರೂ. ಮೌಲ್ಯದ 11.5 ತೊಲ ಬಂಗಾರದ ಆಭರಣ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಸ್ ಹತ್ತುವ ಮಹಿಳೆಯರ ಕೊರಳಲಿದ್ದ ಆಭರಣ ಕಳವಿನ ಸೇಡಂನಲ್ಲಿ ಎರಡು ಹಾಗೂ ಶಹಾಬಾದ್ನಲ್ಲಿ ಒಂದು ಪ್ರಕರಣದ ತನಿಖೆಗೆ ಹೆಚ್ಚುವರಿ ಎಸ್ಪಿ ಮಹೇಶ ಮೇಣ್ಣನವರ, ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಎಸ್.ಹಿರೇಮಠ ಹಾಗೂ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಸೇಡಂ ಸಿಪಿಐ ಮಹಾದೇವ ಡಿ, ಶಹಬಾದ್ ಪಿಐ ನಟರಾಜ್ ಲಾಡೆ ನೇತೃತ್ವದಲ್ಲಿ ಸೇಡಂ ಠಾಣೆ ಪಿಎಸ್ಐ ಉಪೇಂದ್ರಕುಮಾರ, ಶರಣಪ್ಪ ಮತ್ತು ಶಹಬಾದ್ ಠಾಣೆ ಪಿಎಸ್ಐ ಶಾಮರಾಯ ಮತ್ತು ಸಿಬ್ಬಂದಿ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು.
ನಿರಂತರ ನಿಗಾ ಇಟ್ಟು ಪತ್ತೆ: ಕಳ್ಳಿಯರ ಬಗ್ಗೆ ಪೊಲೀಸ್ ತನಿಖಾ ತಂಡ ನಿರಂತರ ನಿಗಾ ಇಟ್ಟಿತ್ತು. ಒಂದು ವಾರ ನಿಗಾ ವಹಿಸಿ, ಶಂಕಿತರನ್ನು ಬಂಧಿಸಿ, ಸೇಡಂನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆದಾಗ ಕಳ್ಳತನ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.