Neelakanth hiremath 
ಕಲಬುರಗಿ

ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಕಲಬುರಗಿ ನಿಲುಗಡೆ: ಕಲ್ಯಾಣ ಕರ್ನಾಟಕ ರೈಲ್ವೆ ಸಂಪರ್ಕ ಬಲವರ್ಧನೆ

ಕಲಬುರಗಿ: ಮುಂಬೈ–ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿಗೆ ಕಲಬುರಗಿಯಲ್ಲಿ ನಿಲುಗಡೆ ಕಲ್ಪಿಸಿರುವುದು ಕಲ್ಯಾಣ ಕರ್ನಾಟಕದ ಜನರಿಗೆ ಸಂತಸದ ಸಂಗತಿ ಎಂದು ಅಖಿಲ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ವಿದ್ಯಾರ್ಥಿ ಘಟಕ ಯುವ ಮೋರ್ಚಾದ ಕಲಬುರಗಿ ಜಿಲ್ಲಾ ಜಂಟಿ ಕಾರ್ಯದರ್ಶಿ ನೀಲಕಂಠ ಹಿರೇಮಠ ತಿಳಿಸಿದ್ದಾರೆ.

ನವೆಂಬರ್ 1ರಂದು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿನ ಉದ್ಘಾಟನೆಯು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರೈಲು ಸಂಪರ್ಕ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕಲಬುರಗಿಯಲ್ಲಿ ನಿಲುಗಡೆ ನೀಡಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು, ವ್ಯಾಪಾರಸ್ಥರು ಸೇರಿದಂತೆ ಉಭಯ ರಾಜ್ಯಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ರೈಲು ಸೇವೆಯಿಂದ ಪ್ರಾದೇಶಿಕ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ಆರ್ಥಿಕ ಚಟುವಟಿಕೆ ಮತ್ತು ಅಭಿವೃದ್ಧಿಗೂ ಉತ್ತೇಜನ ದೊರೆಯಲಿದೆ. ದೂರದ ಪ್ರಯಾಣ ಹೆಚ್ಚು ಸುಗಮ ಹಾಗೂ ಅನುಕೂಲಕರವಾಗಲಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರ ಅನುಕೂಲಕ್ಕಾಗಿ ಈ ಮಹತ್ವದ ಕ್ರಮ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.