mock demonstration 
ಕಲಬುರಗಿ

ಗಲಭೆಕೋರರಿಗೆ ಲಾಠಿ, ಗುಂಡೇಟು: ಕಲಬುರಗಿ ಪೊಲೀಸರಿಂದ ಅಣಕು ಪ್ರದರ್ಶನ

ಕಲಬುರಗಿ: ಒಂದೆಡೆ ಕಾನೂನು ಬದ್ಧ ಹೋರಾಟದ ನೆಪದಲ್ಲಿ ಅಕ್ರಮ ಕೂಟ ರಚಿಸಿ, ಸಾರ್ವಜನಿಕರ ಆಸ್ತಿ ಪಾಸ್ತಿ ಮೇಲೆ ಹಾನಿ ಮಾಡುತ್ತಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ ಗಲಭೆಕೋರರ ಮೇಲೆ ಲಾಠಿ, ಅಶ್ರುವಾಯ, ಜಲಪ್ರಯೋಗ ನಂತರ ಗುಂಡೇಟು ನೀಡುವ ಮೂಲಕ ಗಲಭೆಯನ್ನು ಯಶಸ್ವಿಯಾಗಿ ಪೊಲೀಸರಿಂದ ನಿರ್ವಹಣೆ...
ಇದು ನಗರದ ಡಿಎಆರ್​ ಮೈದಾನದಲ್ಲಿ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಸಮ್ಮುಖದಲ್ಲಿ ಸೋಮವಾರ ನಗರ ಪೊಲೀಸರಿಂದ ಏರ್ಪಡಿಸಿದ್ದ ಗಲಭೆ ನಿಯಂತ್ರಣ ಪರೇಡ್​ (ಅಣಕು ಪ್ರದರ್ಶನ)ನ ದೃಶ್ಯಗಳು.
ಒಂದೆಡೇ ಸರ್ಕಾರ, ಆಡಳಿತ ವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗುತ್ತ ಬರುವ ಅಕ್ರಮ ಕೂಟಕ್ಕೆ ಎಚ್ಚರಿಕೆ ನೀಡಿ, ಮನವರಿಕೆ ಮಾಡಿದರೂ ಪ್ರತಿಭಟನಾಕಾರರು ಸ್ಪಂದಿಸಲಿಲ್ಲ. ತಕ್ಷಣ ಮೊದಲಿಗೆ ಮೈಕ್​ ಮೂಲಕ ಹೊರಟು ಹೋಗುವಂತೆ ಸೂಚನೆ ನೀಡಿದರೂ ಹೋಗದೇ ಪ್ರತಿಭಟನೆ ಉಗ್ರ ಸ್ವರೂಪ ಪಡೆದ ತಕ್ಷಣ ಅಶ್ರುವಾಯು ಸಿಡಿಸಿ, ಹಿಮ್ಮೆಟ್ಟಲು ಪ್ರಯತ್ನಿಸಲಾಯಿತು. ನಂತರ ಜಲಫಿರಂಗಿ ಪ್ರಯೋಗ ನಡೆಸಿ, ಬೆದರಿಸಲಾಯಿತು. ಅದಕ್ಕೂ ಜಗ್ಗದಿದ್ದಾಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ಲಾಠಿ ಪ್ರಹಾರ ನಡೆಸಲಾಯಿತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಗಾಳಿಯಲ್ಲಿ ಗುಂಡು ಹಾರಿಸಲಾಯಿತು.
ಓರ್ವ ಪ್ರತಿಭಟನಾಕಾರನಿಗೆ ಗಾಯವಾಗಿದ್ದು, ಆತನನ್ನು ತಕ್ಷಣ ಪೊಲೀಸ್​ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಪ್ರದರ್ಶನದ ಮೂಲಕ ಆಯುದ್ಧ ಪ್ರಹಾರವೂ ಸಾರ್ವಜನಿಕರ ಹಿತದೃಷ್ಟಿಯಿಂದ ಹೊರತು, ಬಲಪ್ರಯೋಗಕ್ಕಾಗಿ ಅಲ್ಲ ಎಂಬ ಸಂದೇಶ ನೀಡಲಾಯಿತು.
ಪ್ರತಿಭಟನೆ ನೆಪದಲ್ಲಿ ಸಮಸ್ಯೆ ತಡೆಯಲು ಪೊಲೀಸರು ಸನ್ನದ್ಧರಾಗಿರಬೇಕು ಎಂಬ ಕಾರಣಕ್ಕೆ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಸಮ್ಮುಖದಲ್ಲಿ ಪರೇಡ್​ ನಡೆಸಲಾಗಿದೆ ಎಂದು ಎಸಿಪಿ ಬಸವೇಶ್ವರ ಹೀರಾ ವಿಸತ ಮಾಹಿತಿ ನೀಡಿದರು.
ಎಸಿಪಿ ಸರ್ದಾರ್​ ಎಚ್​.ಎಂ.ಡಿ, ಎಸಿಪಿ ಶರಣಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಆರ್​ಪಿಐ ಮಹಾದೇವ ಪಾಟೀಲ್​ ಮತ್ತು ಇತರೆ ಅಧಿಕಾರಿಗಳ ತಂಡವೂ ಶಿಸ್ತುಬದ್ಧವಾಗಿ ಅಣಕು ಪ್ರದರ್ಶನ ನಡೆಸಿದವು. ಸುಮಾರು 71 ಅಧಿಕಾರಿ, ಸಿಬ್ಬಂದಿ ತಂಡವೂ ಅಣಕು ಪ್ರದರ್ಶನ ನಡೆಸಿಕೊಟ್ಟಿತು. ಪಡೆಗಳ ಮುಖ್ಯಸ್ಥರು ಪರೇಡ್​ನಲ್ಲಿ ಹೆಜ್ಜೆ ತಪ್ಪಿದ್ದು, ಕಮಾಂಡ್​ ನೀಡುವಲ್ಲಿ ಮಾತು ತಪ್ಪಿದ್ದಕ್ಕೆ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಪರೋಕ್ಷವಾಗಿ ಇನ್ನಷ್ಟು ತಯಾರಿ, ಸಿದ್ಧತೆ ಅಗತ್ಯ ಎಂಬ ಎಚ್ಚರಿಕೆ ನೀಡಿದರು.
ಡಿಸಿಪಿ ಪ್ರವಿಣ ನಾಯಕ, ಎಸಿಪಿಗಳಾದ ಪ್ರಭು ಡಿ.ಟಿ, ಜೇಮ್ಸ್​ ಮಿನೇಜಸ್​ ಸೇರಿ ನಗರ ವ್ಯಾಪ್ತಿಯ ಎಲ್ಲ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ಗಳು ಭಾಗವಹಿಸಿದ್ದರು.