ಕಲಬುರಗಿ: ಹಲ್ಲೆ ಪ್ರಕರಣವೊಂದರಲ್ಲಿ ಮಹಿಳೆ ದೂರು ನೀಡಲು ಎರಡು ದಿನ ಕಾದರೂ ದೂರು ಪಡೆಯದ ಹಿನ್ನೆಲೆಯಲ್ಲಿ ಬೇಸತ್ತು ಠಾಣೆಯ ಎದುರೇ ವಿಷ ಸೇವಿಸಿ, ಗಂಭೀರ ಸ್ಥಿತಿಗೆ ತಲುಪಿದ ಘಟನೆ ಗೃಹ ಸಚಿವರ ತವರು ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲ್ಲೋಗಿ ಪೊಲೀಸ್ ಠಾಣೆ ಆವರಣದಲ್ಲೇ ನಡೆದಿದೆ.
ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದ ರೇವಮ್ಮ ಗಡೇದ ವಿಷ ಸೇವಿಸಿದ ಮಹಿಳೆ. ಎರಡು ದಿನದ ಹಿಂದೆ ಮಹಿಳೆ, ಆಕೆಯ ಪುತ್ರ ಬೈಕ್ ಮೇಲೆ ಹೊರಟಾಗ ಗುಂಪೊಂದು ಹಲ್ಲೆ ನಡೆಸಿತ್ತು ಎನ್ನಲಾಗಿದ್ದು, ಹಲ್ಲೆ ದೂರು ನೀಡಲು ಮಹಿಳೆ ಠಾಣೆಗೆ ಬಂದಾಗ ಎರಡು ದಿನ ಕಾದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಮಹಿಳೆಯು ಠಾಣೆ ಆವರಣದಲ್ಲೆ ವಿಷ ಸೇವಿಸಿದ್ದು, ಆರೋಗ್ಯ ಗಂಭೀರವಾಗಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.