ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಐಎಸ್ಓ ಪ್ರಮಾಣ ಪತ್ರ
ಕಲಬುರಗಿ: -ಜನಸ್ನೇಹಿ ವ್ಯವಸ್ಥೆ, ತ್ವರಿತ ನಾಗರಿಕ ಸೇವೆ, ವೃತ್ತಿಪರತೆ ಹಾಗೂ ಆಡಳಿತದಲ್ಲಿ ಗುಣಮಟ್ಟದ ಸೇವೆ ಒದಗಿಸುತ್ತಿರುವ ನಗರ ಪೊಲೀಸ್ ಆಯುಕ್ತಾಲಯಕ್ಕೆ ಅಂತಾರಾಷ್ಟ್ರೀಯ ಐಎಸ್ಒ 9001: 2015 ಪ್ರಮಾಣ ಪತ್ರ ಲಭಿಸಿದೆ.
ಆಡಳಿತದಲ್ಲಿ ಸರಳೀಕರಣ, ಸಮಯಕ್ಕೆ ಸರಿಯಾಗಿ ಬಡ್ತಿ, ವರ್ಗಾವಣೆ, ಟಿಎ ಡಿಎ, ದಾಖಲೆಗಳ ನಿರ್ವಹಣೆ, ಸಾರ್ವಜನಿಕ ಹಿತ, ಪಾಸ್ಪೋರ್ಟ್ ಪರಿಶೀಲನೆ ತ್ವರಿತಗತಿ ಸೇರಿ ವಿವಿಧ ವಿಷಯಗಳನ್ನು ಪರಿಗಣಿಸಿ, ಸುಮಾರು ನಾಲ್ಕು ತಿಂಗಳವರೆಗೆ ಪರಿಶೀಲನೆ ನಡೆಸಿ, ನಗರ ಆಯುಕ್ತಾಲಯಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಪ್ರಮಾಣಪತ್ರ ದೊರಕಿದೆ.
ಭಾನುವಾರ ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ ಸಾಂಕೇತಿಕವಾಗಿ ಪ್ರಮಾಣ ಪತ್ರವನ್ನು ನಗರ ಪೊಲೀಸ್ ಆಯುಕ್ತರಿಗೆ ವಿತರಿಸಿದರು.
ನಂತರ ಮಾತನಾಡಿದ ಸಚಿವರು, ಆಯುಕ್ತಾಲಯಕ್ಕೆ ಪ್ರಮಾಣ ಪತ್ರ ದೊರಕಿದ್ದು, ಶ್ಲಾನೀಯ. ಆದರೆ ಜನರಿಂದ ಹೊಗಳಿಕೆಯ ಪ್ರಶಸ್ತಿಯೂ ಜನಸ್ನೇಹಿ ಆದಾಗ ಸಿಗಲಿದೆ. ಈ ನಿಟ್ಟಿನಲ್ಲಿ ಪೊಲೀಸರು ಶ್ರಮಿಸಬೇಕು ಎಂದರು.
ಸಕಾಲ, ಅಟಲ್ ಜನಸ್ನೇಹಿ ಕೇಂದ್ರದಿಂದ ಸಾರ್ವಜನಿಕ ಸೇವೆ ವಿಲೇವಾರಿಯಲ್ಲಿ ರಾಜ್ಯಕ್ಕೆ ಕಲಬುರಗಿ ಮೊದಲ ಸ್ಥಾನ, ಜಿಪಂ ನಲ್ಲಿ ತೆರಿಗೆ ವಸೂಲಾತಿಯಲ್ಲಿ ಕಲಬುರಗಿ ಜಿಲ್ಲೆ 13 ನೇ ಸ್ಥಾನ ಪಡೆದಿದೆ. ಪೊಲೀಸ್ ಕಮಿಷನರೇಟ್ ಉತ್ತಮ ಸ್ಥಾನ ಪಡೆದಿದ್ದು, ಖುಷಿ ವಿಚಾರ ಎಂದರು.
ರಾಜ್ಯದ ವೈದ್ಯಕಿಯ ಶಿಕ್ಷಣ, ಕೌಲಶ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕಲಬುರಗಿ ಪೊಲೀಸ್ ಆಯುಕ್ತಾಲಯ ಅಮೂಲಾಗ್ರ ಬದಲಾವಣೆ, ಸಾರ್ವಜನಿಕರ ಸೇವೆ ವಿಸ್ತರಣೆ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದಿದ್ದಕ್ಕೆ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆ ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್, ಕೂಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವಿಣ ಹರವಾಳ, ಡಿಸಿ ಬಿ.ಫೌಜಿಯಾ ತರನ್ನಮ್, ಜಿಪಂ ಸಿಇಓ ಭಂವರ್ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು ಇತರರಿದ್ದರು. ಬಸವೇಶ್ವರ ಹೀರಾ ನಿರೂಪಿಸಿದರು.
ಸಾರ್ವಜನಿಕರ ಸೇವೆಗಳಲ್ಲಿ ಸುಧಾರಣೆ, ಆಡಳಿತ ವ್ಯವಸ್ಥೆಯಲ್ಲಿ ಶ್ರೀ ಪ್ರಕ್ರಿಯೆ, ದಾಖಲೆಗಳ ವಿಲೇವಾರಿಗೆ ವೇಗ ಸೇರಿ ಇಡೀ ಪೊಲೀಸ್ ವ್ಯವಸ್ಥೆಯಲ್ಲಿ ಗುಣಮಟ್ಟದ ಆಡಳಿತ ತಂದಿದ್ದು, ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾಹಿತಿ, ತಂತ್ರಜ್ಞಾನ ವಿಭಾಗದಲ್ಲೂ ಸುಧಾರಣೆ ಮಾಡಿದ್ದರಿಂದ ಅಂತಾರಾಷ್ಟ್ರೀಯ ಐಎಸ್ಒ 9001: 2015 ಪ್ರಮಾಣ ಪತ್ರ ದೊರಕಿದೆ. ಇದಕ್ಕೆ ಎಲ್ಲ ಅಧಿಕಾರಿ, ಸಿಬ್ಬಂದಿ ಶ್ರಮ ಶ್ಲಾನೀಯ.