school roof collapses 
ಕಲಬುರಗಿ

ಕಲಬುರಗಿ: ಸರ್ಕಾರಿ ಶಾಲೆ ಚಾವಣಿ ಪದರು ಕುಸಿತ: ತಪ್ಪಿದ ಅನಾಹುತ

ಪ್ರಮುಖ ಮುಖ್ಯಾಂಶಗಳು

  • ಆಳಂದ ತಾಲೂಕಿನ ಸಂಗೋಳಗಿ ಸಿ ಗ್ರಾಮದಲ್ಲಿ ಘಟನೆ
ಕಲಬುರಗಿ: ನಗರದ ಸರ್ಕಾರಿ ಪಿಯು ಕಾಲೇಜು ದುರಂತದ ಆಘಾತ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಶಾಲಾ ಕಟ್ಟಡದ ಅವಘಡ ಸಂಭವಿಸಿದೆ. ಆಳಂದ ತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಪದರವು ಇಂದು ಮುಂಜಾನೆ ಏಕಾಏಕಿ ಕುಸಿದು ಬಿದ್ದಿದೆ. ಭಾನುವಾರ ಶಾಲಾ ರಜೆ ಇದ್ದ ಕಾರಣ ಭಾರಿ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಇತ್ತೀಚಿನ ಕಾಲೇಜು ದುರಂತದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಪೋಷಕರಲ್ಲಿ ತೀವ್ರ ಆತಂಕ ಹಾಗೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ವರದಿ ನೀಡಿ ಸ್ಪಷ್ಟನೆ ನೀಡಿದೆ. ಕುಸಿದು ಬಿದ್ದಿರುವುದು ಸುಮಾರು 60 ರಿಂದ 70 ವರ್ಷದ ಅತ್ಯಂತ ಹಳೆಯ ಕೋಣೆಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ಯಾವುದೇ ತರಗತಿಗಳನ್ನು ನಡೆಸುತ್ತಿರಲಿಲ್ಲ ಎಂದು ಶಾಲೆಯ ಮುಖ್ಯ ಶಿಕ್ಷಕರು ಸ್ಪಷ್ಟಪಡಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಬಿಇಓ ಆದೇಶದಂತೆ ಸಿಆರ್‌ಪಿ ಶ್ರೀ ಧರ್ಮರಾವ್, ಮುಖ್ಯಾಧ್ಯಾಪಕಿ ಶ್ರೀಮತಿ ಪುಷ್ಪಾ ಹಾಗೂ ಸಹ ಶಿಕ್ಷಕರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಆ ಭಾಗಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಶಾಲೆಯಲ್ಲಿ ಒಟ್ಟು 11 ಕೋಣೆಗಳಿದ್ದು, 6 ಕೋಣೆಗಳಲ್ಲಿ ಸುರಕ್ಷಿತವಾಗಿ ತರಗತಿಗಳು ನಡೆಯುತ್ತಿವೆ. ಆದರೆ, 204 ವಿದ್ಯಾರ್ಥಿಗಳು ಕಲಿಯುತ್ತಿರುವ ಈ ಶಾಲೆಯಲ್ಲಿ ಇಂದಿಗೂ 3 ಶಿಥಿಲಗೊಂಡ ಕೋಣೆಗಳನ್ನು ತುರ್ತಾಗಿ ನೆಲಸಮ ಮಾಡಬೇಕಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ. ಜಿಲ್ಲಾದ್ಯಂತ ಇರುವ ಇಂತಹ ಹಳೆಯ ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಳೆಯ ಕಟ್ಟಡ ನೆಲಸಮ ಮಾಡಿ: ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅದೃಷ್ಟವಶಾತ್ ಭಾನುವಾರ ರಜೆ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಿಕ್ಷಣ ಇಲಾಖೆಯು ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ಶಾಲೆಯಲ್ಲಿ ನೆಲಸಮ ಮಾಡಬೇಕೆಂದು ಗುರುತಿಸಲಾಗಿರುವ ಮೂರು ಶಿಥಿಲಗೊಂಡ ಕೋಣೆಗಳನ್ನು ತಕ್ಷಣವೇ ತೆರವುಗೊಳಿಸಿ ಮಕ್ಕಳ ಪ್ರಾಣ ರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.