ಕಲಬುರಗಿ: ನಂದಿಕೂರದ ಮಲ ಶುದ್ಧೀಕರಣ ಟಕಕ್ಕೆ ಜಮೀನು ಸ್ವಾದಿನ ಪಡೆದಿದ್ದಕ್ಕೆ ಹೆಚ್ಚುವರಿ ಪರಿಹಾರ ವಿಳಂಬ ಮಾಡಿರುವುದಕ್ಕೆ ಗುರುವಾರ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ್ದು, ಕೋರ್ಟ್ ಎದುರು ಅಧಿಕಾರಿಗಳು ಹಾಜರಾಗಿ, ವಿನಂತಿಸಿದ ನಂತರ ಬಿಡುಗಡೆ ಮಾಡಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಲಯದ ಸಿಜೆಎಂ ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಇಲಾಖೆ ಸಿಬ್ಬಂದಿಯೂ ಜಿಲ್ಲಾಧಿಕಾರಿ ಕಚೇರಿ ಎದುರು ನಿಲುಗಡೆ ಮಾಡಿದ್ದ ಕಾರ್ನ್ನು ಜಪ್ತಿ ಮಾಡಿ, ಕೋರ್ಟ್ಗೆ ಕೊಂಡ್ಯೊಯ್ದರು.
ನಂದಿಕೂರದಲ್ಲಿ ಮಲಶುದ್ಧೀಕರಣ ಟಕ ಸ್ಥಾಪನೆಗಾಗಿ 11 ಜನರಿಂದ ಭೂಸ್ವಾಧಿನ ಪಡೆದುಕೊಂಡಿದ್ದು, ಅದರಲ್ಲಿ ಐವರಿಗೆ ಹೆಚ್ಚುವರಿ ಮೊತ್ತ ಪರಿಹಾರ ನೀಡಬೇಕಿತ್ತು. ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದಕ್ಕೆ ಪ್ರಕಾಶ ಮಲಕಪ್ಪ ಎಂಬುವವರು ಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ವಿಳಂಬ ಮಾಡಿದ್ದಕ್ಕೆ ಡಿಸಿ ಕಚೇರಿಯ ಸ್ವತ್ತು ಜಪ್ತಿಗೆ ಆದೇಶಿಸಿತ್ತು.
ಕೋರ್ಟ್ ಆದೇಶದಂತೆ ಗುರುವಾರ ಮಧ್ಯಾಹ್ನ ನ್ಯಾಯಾಂಗ ಸಿಬ್ಬಂದಿಯೂ ಡಿಸಿ ಕಾರ್ನ್ನು ಟೋಚರ್ ಮೂಲಕ ತೆಗೆದುಕೊಂಡು ಹೋಗಲು ಮುಂದಾದರು. ಈ ವೇಳೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಅರ್ಜಿದಾರರ ಪರ ವಕೀಲರಿಗೆ ಮನವೊಲಿಸಲು ಪ್ರಯತ್ನಿಸಿದರು. ಈ ಮಧ್ಯೆ ಕಾರ್ ತೆಗೆದುಕೊಂಡು ಕೋರ್ಟ್ಗೆ ಹೋಗಲಾಯಿತು.
ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕೋರ್ಟ್ಗೆ ಹಾಜರಾಗಿ, ನ್ಯಾಯಾಧೀಶರ ಎದುರು ಪರಿಹಾರ ಕೊಡಿಸಲಾಗುವುದು. ಕಾರ್ ಬಿಡುಗಡೆ ಮಾಡಿ ಎಂದು ವಿನಂತಿ ಮಾಡಿದರು. ಅಲ್ಲದೇ ಪಾಲಿಕೆಯಿಂದ ಐದು ಲಕ್ಷ ರೂ. ಚೆಕ್ ನೀಡಿದರು. ಒಂದು ತಿಂಗಳಲ್ಲಿ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದ ಕೋರ್ಟ್ ಕಾರ್ ಬಿಡುಗಡೆ ಮಾಡಿ, ಆದೇಶಿಸಿದ್ದರಿಂದ ಕಾರ್ ಮರಳಿ ಡಿಸಿ ಕಚೇರಿಗೆ ತರಲಾಯಿತು.
ಇಇ ಬಂಧನ: ಭೂಸ್ವಾಧಿನ ಪ್ರಕರಣದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಾರೆಂದು ಕೋರ್ಟ್ ಬಂಧನ ವಾರಂಟ್ ಹಿನ್ನೆಲೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ನರಸಿಂಗ್ರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.