ಮಹಿಳಾ ಕಾರ್ಯಕರ್ತೆ ಜ್ಯೋತಿ ಪಾಟೀಲ್  
ಕಲಬುರಗಿ

ಬಿಜೆಪಿ ಕಾರ್ಯಕರ್ತನ ಮನೆಯ ಬಾಗಿಲಲ್ಲೇ ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಸಾವಿಗೆ ಶರಣು! BJP Woman activist

ಪ್ರಮುಖ ಮುಖ್ಯಾಂಶಗಳು

  • ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಬಿಜೆಪಿ ಮಹಿಳಾ ಕಾರ್ಯಕರ್ತೆ ಆತ್ಮಹತ್ಯೆ
  • ಕಲಬುರಗಿಯ ಬ್ರಹ್ಮಪೂರ ಬಡಾವಣೆಯ ನಿವಾಸಿ ಜ್ಯೋತಿ ಪಾಟೀಲ್ ಮೃತ ದುರ್ದೈವಿ
  • ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ್ ಎಂಬುವವರ ಮನೆಗೆ ತೆರಳಿದ್ದಾಗ ಘಟನೆ
ಕಲಬುರಗಿ: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರು ( BJP Woman activist ) ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಲಬುರಗಿಯ ಬ್ರಹ್ಮಪೂರ ಬಡಾವಣೆಯ ನಿವಾಸಿ ಜ್ಯೋತಿ ಪಾಟೀಲ್ (35) ಮೃತಪಟ್ಟ ದುರ್ದೈವಿಯಾಗಿದ್ದು, ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿಕೂರ ಗ್ರಾಮದಲ್ಲಿ ಈ ದಾರುಣ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಜ್ಯೋತಿ ಪಾಟೀಲ್ ಅವರು ಅದೇ ಗ್ರಾಮದ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ್ ಎಂಬುವವರ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ನಡೆದಿದ್ದೇನು?

ಜ್ಯೋತಿ ಪಾಟೀಲ್ ಅವರು ಮಲ್ಲಿನಾಥ್ ಬಿರಾದಾರ್ ಅವರ ಮನೆಗೆ ಹೋದಾಗ ಮಲ್ಲಿನಾಥ್ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಅವರ ಪತ್ನಿ ಮತ್ತು ಮೂವರು ಮಕ್ಕಳು ಮಾತ್ರ ಇದ್ದರು. ಜ್ಯೋತಿ ಅವರು ಬಾಗಿಲು ಬಡಿದಿದ್ದು, ಮನೆಯವರು ಬಾಗಿಲು ತೆರೆಯುತ್ತಿದ್ದಂತೆಯೇ ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದ ಜ್ಯೋತಿ ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದ ಮಲ್ಲಿನಾಥ್ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಫರಹತಾಬಾದ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣವೇನು?

ಬಿಜೆಪಿ ಕಾರ್ಯಕರ್ತೆಯಾಗಿದ್ದ ಜ್ಯೋತಿ ಪಾಟೀಲ್ ಅವರು ಮಲ್ಲಿನಾಥ್ ಬಿರಾದಾರ್ ಅವರ ಮನೆಯ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಇಬ್ಬರ ನಡುವೆ ಯಾವುದಾದರೂ ಹಣಕಾಸಿನ ವಿಚಾರ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದವೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.