ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್ ಕಂಪನಿ ಅಧಿಕಾರಿಗಳು ಮತ್ತು ಡೀಲರ್‌ಗಳೊಂದಿಗೆ ಡಿಸಿ ಫೌಜಿಯಾ ತರನ್ನುಮ್ ಮಂಗಳವಾರ ಸಭೆ ನಡೆಸಿದರು. ಭಂವರ್‌ಸಿAಗ್ ಮೀನಾ, ಡಾ.ಎಸ್.ಡಿ.ಶರಣಪ್ಪ, ಮಹೇಶ ಮೇಘಣ್ಣವರ್ ಇದ್ದರು.
- ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಎಚ್ಚರಿಕೆ
- ಗ್ಯಾಸ್ ಏಜೆನ್ಸಿ, ಕಂಪನಿ ಅಧಿಕಾರಿಗಳೊಂದಿಗೆ ಸಭೆ
ಕಲಬುರಗಿ: ಮಧ್ಯ ಪ್ರಾಚ್ಯ ದೇಶದಲ್ಲಿನ ಯುದ್ಧದ ಹಿನ್ನೆಲೆ ಜನ ಆತಂಕಗೊAಡು ಸಿಲಿಂಡರ್ ಬುಕ್ಕಿಂಗ್ ಮಾಡುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ, ಅನಧಿಕೃತ ಫಿಲ್ಲಿಂಗ್ ಮಾಡಿದಲ್ಲಿ ಅಂತಹ ಏಜೆನ್ಸಿಗಳ ಪರವಾನಗಿ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್ ಕಂಪನಿ ಅಧಿಕಾರಿಗಳು ಮತ್ತು ಡೀಲರ್‌ಗಳೊಂದಿಗೆ ಮಂಗಳವಾರ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿದ ಅವರು, ಸಾರ್ವಜನಿಕರ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಗ್ಯಾಸ್ ಏಜೆನ್ಸಿಗಳು ಕಾರ್ಯನಿರ್ವಹಿಸಬೇಕು. ಫಿಫೋ (ಮೊದಲು ನೊಂದಾಯಿಸಿದವರಿಗೆ ಮೊದಲು ವಿಲೇವಾರಿ) ಮಾದರಿಯಲ್ಲಿ ಸಿಲಿಂಡರ್ ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯ ಯಾವುದೇ ಆರೋಗ್ಯ ಸಂಸ್ಥೆಗಳಿಗೆ ಸಿಲಿಂಡರ್ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಬಡವರಿಗೆ ರಿಯಾಯಿತಿ ದರದಲ್ಲಿ ಉಪಾಹಾರ-ಊಟ ನೀಡುವ ಇಂದಿರಾ ಕ್ಯಾಂಟೀನ್‌ಗೂ ಗ್ಯಾಸ್ ಸಮಸ್ಯೆ ಆಗಕೂಡದು. ಸಿಲಿಂಡರ್ ಮಾರಾಟದ ಕುರಿತು ನಿತ್ಯ ಆವಕ ಮತ್ತು ಜಾವಕ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಬೇಕು. ತಾಲೂಕುವಾರು ಸಿಲಿಂಡರ್ ಗ್ಯಾಸ್ ಏಜೆನ್ಸಿಗಳ ಮೇಲೆ ತೀವ್ರ ನಿಗಾ ವಹಿಸಲು ಅಧಿಕಾರಿಗಳ ತಂಡ ರಚಿಸಲಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದ್ದರೂ ಜನ ಆತಂಕಗೊAಡಿದ್ದು, ಇಂತಹ ಒಂದು ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಗ್ಯಾಸ್ ಎಜೆನ್ಸಿಗಳು ಜಿಲ್ಲಾಡಳಿತದ ನಿರ್ದೇಶನ ಪಾಲಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು. ಏಜೆನ್ಸಿಗಳು ಸಾರ್ವಜನಿಕರಿಗೆ ಸಿಲಿಂಡರ್ ಸಮಸ್ಯೆ ಇಲ್ಲ ಎಂಬುದನ್ನು ಖಾತ್ರಿಪಡಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿAಗ್ ಮೀನಾ ಮಾತನಾಡಿ, ಜಿಲ್ಲಾದ್ಯಂತ ಅಂಗನವಾಡಿ, ಶಾಲೆ, ವಸತಿ ಶಾಲೆ, ವಸತಿ ನಿಲಯಗಳಿಗೆ ಸಿಲಿಂಡರ್ ಸಮಸ್ಯೆ ಆಗದಂತೆ ಗ್ಯಾಸ್ ಏಜೆನ್ಸಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಆಹಾರ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ್ ದೌಲಾ ಮಾತನಾಡಿದರು.
ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ್, ಕಾನೂನು ಮಾಪನಶಾಸ್ತç ಇಲಾಖೆಯ ಸಹಾಯಕ ನಿರ್ದೇಶಕ ರಫೀಕ್ ಲಾಡಜಿ ಇತರರಿದ್ದರು.
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಸಿಲಿಂಡರ್ ಕೊರತೆ ಇಲ್ಲ. ನಿತ್ಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಪನಿಗಳು ಸಿಲಿಂಡರ್ ಪೂರೈಸುತ್ತಿವೆ. ಸಾರ್ವಜನಿಕರು ಆತಂಕಗೊಳ್ಳಬಾರದು. ೨೫ ದಿನ ಅವಧಿ ಮೀರಿದ ನಂತರವೇ ಸಿಲಿಂಡರ್ ಬುಕ್ ಮಾಡಬೇಕು. ಅನಗತ್ಯ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಮತ್ತು ಡೆಲಿವರಿ ಮಾಡುವ ಸಿಬ್ಬಂದಿಗೆ ತೊಂದರೆ ನೀಡಬಾರದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜನತೆಗೆ ಮನವಿ ಮಾಡಿದರು.
ಡೆಲಿವರಿ ಆದ ೨೫ ದಿನ ಬಳಿಕ ಸಿಲಿಂಡರ್ ಬುಕ್ ಮಾಡಿ
ಪ್ರಸ್ತುತ ಜಿಲ್ಲೆಯಲ್ಲಿ ೪೭ ಗ್ಯಾಸ್ ಡೀಲರ್‌ಗಳಿದ್ದು, ಇದರಲ್ಲಿ ೩,೨೬,೬೭೪ ಸಿಂಗಲ್ ಸಿಲಿಂಡರ್ ಮತ್ತು ೨,೩೨,೨೯೪ ಡಬಲ್ ಸಿಲಿಂಡರ್ ಗ್ರಾಹಕರಿದ್ದಾರೆ. ೧೦,೩೭೨ ವಾಣಿಜ್ಯ ಸಿಲಿಂಡರ್ ಗ್ರಾಹಕರಿದ್ದು, ೨,೬೮,೩೯೧ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿದ್ದಾರೆ. ಪಿಎಂ ಉಜ್ವಲ್ ಯೋಜನೆಯ ಗ್ರಾಹಕರಿಗೆ ೪೫ ದಿನಕ್ಕೆ ಮತ್ತು ಇತರೆ ಗ್ರಾಹಕರಿಗೆ ಸಿಲಿಂಡರ್ ಬುಕ್ ಮಾಡಲು ಹಿಂದಿನ ಡೆಲವರಿಗೆ ಕನಿಷ್ಠ ೨೫ ದಿನ ಅಂತರವಿರಬೇಕು. ಮಂಗಳವಾರಕ್ಕೆ ೧೨,೭೦೯ ಗೃಹ ಬಳಕೆ ಸಿಲಿಂಡರ್ ಮತ್ತು ೧,೦೩೦ ವಾಣಿಜ್ಯ ಸಿಲಿಂಡರ್ ಜಿಲ್ಲೆಯಲ್ಲಿ ದಾಸ್ತಾನಿದೆ. ಯಾವುದೇ ಸಿಲಿಂಡರ್ ಸಮಸ್ಯೆ ಇಲ್ಲ ಎಂದು ಆಹಾರ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ್ ದೌಲಾ ವಿವರಿಸಿದರು.
ಸಿಲಿಂಡರ್ ಕೃತಕ ಸಮಸ್ಯೆ ಸೃಷ್ಟಿ ಮಾಡಬಾರದು. ಅವಶ್ಯಕತೆ ಇದ್ದಲ್ಲಿ ಏಜೆನ್ಸಿ, ದಾಸ್ತಾನು ಘಟಕಗಳಿಗೆ ಪೊಲೀಸ್ ಭದ್ರತೆ ನೀಡಲಾಗುವುದು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ಪೊಲೀಸರ ನೆರವು ಸಿಗಲಿದೆ.
| ಡಾ.ಎಸ್.ಡಿ.ಶರಣಪ್ಪ, ನಗರ ಪೊಲೀಸ್ ಆಯುಕ್ತ