ಚಿಂಚೋಳಿ: ತಾಲೂಕಿನ ಕಲ್ಲೂರ ರೋಡ, ಭಕ್ತಂಪಳ್ಳಿ, ಗಂಗನಪಳ್ಳಿ, ಗರಗಪಳ್ಳಿ, ಮಿರಿಯಾಣ, ಸೋಮಲಿಂಗದಳ್ಳಿ, ಪೋಲಕಪಳ್ಳಿ, ತಾಂಡಾ ಗ್ರಾಮಗಳ ವ್ಯಾಪ್ತಿಯಲ್ಲಿರುವ ಚೆಟ್ಟಿನಾಡು ಸಿಮೆಂಟ್ ಕಾರ್ಪೋರೇಶನ್ ಲಿಮಿಟೆಡ್ ಕಂಪನಿಯಿಂದ ಅನ್ಯಾಯಕ್ಕೆ ಒಳಗಾಗಿರುವ ರೈತರು, ನಿರುದ್ಯೋಗಿ ಯುವಕರು ಹಾಗೂ ಸಾರ್ವಜನಿಕರ ಹಿತ ಕಾಪಾಡಲು ಜೆಡಿಎಸ್ ಪಕ್ಷದಿಂದ ಗ್ರಾಮದ ಬಸವೇಶ್ವರ ವೃತ್ತದ ಬಳಿ ಬುಧವಾರದಂದು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ತಾಲೂಕು ಜೆಡಿಎಸ್ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಮಾತನಾಡಿ ಕಳೆದ 18 ವರ್ಷಗಳಿಂದ ಚೆಟ್ಟಿನಾಡು ಕಂಪನಿ ಭೂ ನೀಡಿದ ರೈತರಿಗೆ ಹಾಗೂ ಸ್ಥಳೀಯ ನಿರುದ್ಯೋಗ ಹೋಗಲಾಡಿಸುವಲ್ಲಿ ಸಂಪೂರ್ಣ ಅನ್ಯಾಯ ಏಸಗುತ್ತಿದೆ ಎಂದು ಕಂಪನಿಯ ವಿರುದ್ಧ ಹರಿಹಾಯ್ದರು.
ಕೂಡಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಮೌನ ತಾಳಿ ಕಂಪನಿ ಪರ ನಿಂತಿರುವ ಅಧಿಕಾರಿಗಳಾದ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ನಿರ್ದೇಶಕರನ್ನು ಅಮಾನತ್ತು ಮಾಡಬೇಕು. ಕಲ್ಲೂರ ರೋಡ ಗ್ರಾಮದ 40 ಎಕರೆ ಗೋಮಾಳ ಭೂಮಿ ಅನಾಧಿಕೃತವಾಗಿ ಹೈದ್ರಾಬಾದ್ ಮೂಲದ ವ್ಯಕ್ತಿಗಳು ಕಬ್ಜೆ ಮಾಡಿದ್ದು, ಕೂಡಲೇ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಗ್ರಾಮಸ್ಥರ ಸುಪರ್ದಿಗೆ ಕಲ್ಪಿಸುವಂತೆ ಒತ್ತಾಯಿಸಿ ಧರಣಿ ನಡೆಯುತ್ತಿದೆ.
ಈ ಹೋರಾಟದಲ್ಲಿ ಹಣಮಂತ ಪೂಜಾರಿ, ಗೌರಮ್ಮ ಕಲ್ಲೂರ ರೋಡ, ಸಿದ್ದಯ್ಯ ಸ್ವಾಮಿ, ಮಂಜೂರ ಅಹ್ಮದ, ಪ್ರಭಾಕರ ಶಾಬಾದಿ, ಜುಬೇರ ಪಟೇಲ್, ಜಗದೇವಿ, ಲಲೀತಾಬಾಯಿ, ಶೆಶಿಕಲಾ, ರೇಣುಕಾಬಾಯಿ, ಆಶಾಲತಾ, ಇರ್ಪಾನಬೇಗಂ, ಫೈಯಾಜೋದ್ದಿನ, ಮಹ್ಮದ ರಹೀಮಾನ, ರವಿಕುಮಾರ, ಭೀಮಣ್ಣ, ಸೋಮಶೇಖರ್, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.