ಔರಾದ್ ತಾಲೂಕಿನ ಸಂತಪೂರ ಆನಂದ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿವು ವಿಷಯ ಕುರಿತು ಜರುಗಿದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಕಾಶ ದೇಶಮುಖ, ದತ್ತಾತ್ರಿ ಮಡಿವಾಳ, ಮಹೇಶ ಗೋರನಾಳಕರ್, ವಿನಯಕುಮಾರ ಮಾಳಗೆ, ಬಾಲಾಜಿ ಕುಂಬಾರ, ಮಾಲಸ್ವಾಮಿ, ಶೀಲಾವತಿ, ಕಲ್ಪನಾ ಇದ್ದರು.
- ಸಂಪನ್ಮೂಲ ಶಿಕ್ಷ ಕ ಪ್ರಕಾಶ ದೇಶಮುಖ ಅಭಿಮತ
- ಸಂತಪುರದಲ್ಲಿ ಜಾಗೃತಿ ಕಾರ್ಯಕ್ರಮ
ಔರಾದ್: ಗಡಿಭಾಗದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯಕ್ಷ ಕರ್ತವ್ಯವಾಗಿದೆ ಎಂದು ಸಂಪನ್ಮೂಲ ಶಿಕ್ಷಕ ಪ್ರಕಾಶ ದೇಶಮುಖ ಹೇಳಿದರು.
ಸಂತಪೂರ ಗ್ರಾಮದ ಆನಂದ ಪ್ರೌಢ ಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಜಿಲ್ಲಾ ಘಟಕ ಬೀದರ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿವು ವಿಷಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗಡಿಭಾಗದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕುಸಿಯುತ್ತಿದ್ದು, ಆಂಗ್ಲ ಮಾಧ್ಯಮದ ಪ್ರಭಾವ ಹೆಚ್ಚುತ್ತಿದೆ. ಇದರಿಂದ ಮಕ್ಕಳಿಗೆ ಕನ್ನಡ ಶಿಕ್ಷಣ ದೊರೆಯದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕನ್ನಡ ಭಾಷೆಯ ಉಳಿವಿಗಾಗಿ ಸರ್ಕಾರ ಹಾಗೂ ಸಮಾಜ ಜಂಟಿಯಾಗಿ ಕೈಜೋಡಿಸಬೇಕು. ಗಡಿಭಾಗಗಳಲ್ಲಿ ಕನ್ನಡ ಶಾಲೆಗಳನ್ನು ಬಲಪಡಿಸಬೇಕು. ಕನ್ನಡ ಶಿಕ್ಷಕ ನೇಮಕಾತಿ, ಗ್ರಂಥಾಲಯಗಳ ಸ್ಥಾಪನೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಉಪನ್ಯಾಸಕ ದತ್ತಾತ್ರಿ ಮಡಿವಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡಿನ ಪ್ರಮುಖ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂದೊಂದಿಗೆ ನಿಕಟ ಸಂಬಂಧ ಹೊಂದಿದ ಅನೇಕ ಲೇಖಕ, ಸಾಹಿತಿಗಳು ದೇಶದೆಲ್ಲೆಡೆ ಪಸರಿಸಿದ್ದಾರೆ. ಇದೀಗ ವಿದ್ಯಾವರ್ಧಕ ಸಂಘವು ನಾಡಿನಾದ್ಯಂತ ಸಾಹಿತ್ಯ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಯೋಜಕ ಮಹೇಶ ಗೋರನಾಳಕರ್ ಮಾತನಾಡಿ, ಯುವಜನರು ಇತರ ಭಾಷೆಗೆ ಗೌರವಿಸುವ ಜತೆಗೆ ಕನ್ನಡ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೆ ಮಾತನಾಡುವ ಅಭ್ಯಾಸ ಬೆಳೆಸಬೇಕು. ಕನ್ನಡ ಮಾಧ್ಯಮ ಶಿಣಕ್ಕೆ ಉತ್ತೇಜನ ನೀಡಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯ ವನ್ಯಜಿವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಯ ಜೊತೆಗೆ ಪರಿಸರ ಉಳಿಸುವ ಕಾರ್ಯವೂ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭಾಷೆ ನಮ್ಮ ಸಂಸ್ಕೃತಿ , ಪರಂಪರೆ ಮತ್ತು ಗುರುತಿನ ಪ್ರತಿಕವಾಗಿದ್ದರೆ, ಪರಿಸರ ನಮ್ಮ ಜೀವನದ ಆಧಾರವಾಗಿದೆ ಎಂದರು.
ಸಾಹಿತಿ, ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿದರು. ಶಿಕ್ಷಣ ಪ್ರೇಮಿ ಅನೀಲ ಪಾಟೀಲ್ ಧುಪತಮಹಾಗಾಂವ್, ನ್ಯಾಯವಾದಿ ಪ್ಯಾರುಸಾಬ್ ಶೇಖ್, ಶಿಕರಾದ ರಾಜರೆಡ್ಡಿ, ಮಾಲಸ್ವಾಮಿ, ಶೀಲಾವತಿ, ಕಲ್ಪನಾ, ಉಮಾಕಾಂತ, ಭೀಮಾಶಂಕರ ವೈರಾಗ್ಯ, ರವಿ ಚವ್ಹಾಣ, ಕರಣ ಇತರರಿದ್ದರು. ವಿದ್ಯಾರ್ಥಿಗಳಿಂದ ಜರುಗಿದ ನೃತ್ಯ, ನಾಟಕ, ಗಾಯನ ಸಭಿಕರ ಗಮನ ಸೆಳೆಯಿತು.