ರಾಜ್ಯದ ಆರ್ಥಿಕ ಸ್ಥಿತಿ ಅದೋಗತಿಗೆ ಇಳಿಸಿದ ರಾಜ್ಯ ಕಾಂಗ್ರೆಸ್​ ವಿರುದ್ಧ ಬೆಂಗಳೂರಿನ ವಿಧಾನಸೌಧದ ಎದುರಿನ ಕೆಂಗಲ್​ ಹನುಮಂತಯ್ಯ ಪ್ರತಿಮೆ ಎದುರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂಎಲ್​ಸಿ ಡಾ.ಬಿ.ಜಿ.ಪಾಟೀಲ್​ ಸೇರಿ ಇತರರು ಭಾಗವಹಿಸಿದ್ದರು. 
ಕಲಬುರಗಿ

ಆರ್ಥಿಕ ನಿರ್ವಹಣೆ ಕುರಿತು ಶ್ವೇತಪತ್ರ ಹೊರಡಿಸಿ

ಡಾ.ಬಿ.ಜಿ.ಪಾಟೀಲ್​ ಆಗ್ರಹ

ಕಲಬುರಗಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಆರ್ಥಿಕ ನಿರ್ವಹಣೆ ವಿರುದ್ಧ ಬಿಜೆಪಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ಬೆಂಗಳೂರಿನ ವಿಧಾನಸೌಧದ ಎದುರಿನ ಕೆಂಗಲ್​ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಸೇರಿ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ರಾಜ್ಯದ ಆದಾಯ ವೆಚ್ಚ, ಸಾಲದ ಪ್ರಮಾಣ, ವಿವಿಧ ಇಲಾಖೆಗಳ ಬಾಕಿ ಪಾವತಿಗಳು ಹಾಗೂ ಯೋಜನೆಗಳಿಗೆ ಮೀಸಲಾದ ಮತ್ತು ಬಿಡುಗಡೆಯಾದ ಅನುದಾನದ ಕುರಿತು ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದರು.

ಜನರಿಂದ ಸಂಗ್ರಹಿಸುವ ತೆರಿಗೆ ಹಣ ಸಮರ್ಪಕ ಬಳಸುವುದು ಸರ್ಕಾರದ ಜವಾಬ್ದಾರಿ. ಆರ್ಥಿಕ ಸಂಪನ್ಮೂಲಗಳ ಅಭಿವೃದ್ಧಿ, ರೈತರು, ಬಡವರು ಹಾಗೂ ಸಾಮಾನ್ಯ ಜನರ ಹಿತಕ್ಕೆ ಬಳಸಬೇಕು. ಆರ್ಥಿಕ ಶಿಸ್ತು ಕಾಪಾಡುವಲ್ಲಿ ಸರ್ಕಾರ ವಿಫಲವಾದರೆ ಅದರ ಪರಿಣಾಮ ರಾಜ್ಯದ ಅಭಿವೃದ್ಧಿ ಮೇಲೆ ಬೀಳಲಿದೆ ಎಂದು ಹೇಳಿದರು. ರಾಜ್ಯದ ಹಿತಾಸಕ್ತಿ ಹಾಗೂ ಜನರ ಹಕ್ಕುಗಳಿಗಾಗಿ ಬಿಜೆಪಿ ಸದನದ ಒಳಗೂ, ರಸ್ತೆಯ ಮೇಲೂ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.