ಶಹಾಬಾದ್: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿರುವ ಜಿಲ್ಲಾ ಪಂಚಾಯಿತಿ ಸಿಇಒ, ಶಹಾಬಾದ್ ತಾಲೂಕನ್ನು ಕಡೆಗಣಿಸಿರುವುದಕ್ಕೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ಹೊಸ ತಾಲೂಕು ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಒಳಗೊಂಡಂತೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ತಾಲೂಕು ಪಂಚಾಯಿತಿ ವ್ಯಾಪ್ತಿಗೆ ನೋಡಲ್ ಅಧಿಕಾರಿ ಹಾಗೂ ತಾಂತ್ರಿಕ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಅವರ ಮೊಬೈಲ್ ಮತ್ತು ಕಚೇರಿ ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಶಹಾಬಾದ್ ತಾಲೂಕಿಗೆ ಮಾತ್ರ ಯಾವುದೇ ನೋಡಲ್ ಅಧಿಕಾರಿ ಅಥವಾ ತಾಂತ್ರಿಕ ಅಧಿಕಾರಿಯನ್ನು ನೇಮಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕುಡಿಯುವ ನೀರಿನ ಅಭಾವ, ನೀರು ಸರಬರಾಜಿನಲ್ಲಿ ವ್ಯತ್ಯಯ, ಪೈಪ್ಲೈನ್ ದುರಸ್ತಿ, ಕಲುಷಿತ ನೀರು ಪೂರೈಕೆ ಸೇರಿ ವಿವಿಧ ಸಮಸ್ಯೆಗಳು ಎದುರಾದಾಗ ಸಾರ್ವಜನಿಕರು ಯಾರನ್ನು ಸಂಪರ್ಕಿಸಬೇಕು? ತಮ್ಮ ಅಹವಾಲುಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಎಂದು ಸ್ಥಳಿಯರು ಪ್ರಶ್ನಿಸಿದ್ದಾರೆ.
ಈ ಗಂಭೀರ ವಿಚಾರವನ್ನು ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದು, ಶಹಾಬಾದ್ ತಾಲೂಕಿಗೂ ಕೂಡಲೇ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶಹಾಬಾದ್ ತಾಲೂಕಿಗೆ ನೋಡಲ್ ಅಧಿಕಾರಿ ನೇಮಿಸದೆ ರ್ನಿಲ್ಯ ವಹಿಸಿಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾದರೆ ಅದಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಅವರೇ ನೇರ ಹೊಣೆಗಾರರಾಗಬೇಕಾಗುತ್ತದೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ಮುಂದಾಗಬೇಕಾಗುತ್ತದೆ.> ಮಹ್ಮದ್ ಉಬೇದುಲ್ಲಾ, ಅಧ್ಯ, ಶಹಾಬಾದ್ ಅಭಿವೃದ್ಧಿ ಹೋರಾಟ ಸಮಿತಿ