ಕಲಬುರಗಿ: ನಗರದ ಬಿದ್ದಾಪುರ ಕಾಲನಿ ಬಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಊಟ ಮಾಡಿ ವೇಟರ್ ಜತೆಗೆ ಜಗಳ ತೆಗೆದು, ಬಿಲ್ ಕೊಡದೇ ಮಾಲೀಕನಿಗೆ ಪಿಸ್ತೂಲ್ ಹೋಲುವ ವಸ್ತು ತೋರಿಸಿ ಕೊಲೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಇಕ್ಬಾಲ್ ಕಾಲನಿಯ ಸೈಯದ್ ಜಿಲಾನ್, ಜಾವೇದ್ ಪಟೇಲ್ ಬಂಧಿತ ಆರೋಪಿಗಳು. ಬಂಧಿತರಿಂದ ಕಂದು ಬಣ್ಣದ ಪಿಸ್ತೂಲ್ನಂತೆ ಕಾಣುವ ಒಂದು ಗ್ಯಾಸ್ ಲೈಟರ್ ಜಪ್ತಿ ಮಾಡಲಾಗಿದೆ.
ಜು.22ರಂದು ಬಿದ್ದಾಪುರ ಕಾಲನಿ ಬಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಊಟ ಮಾಡಲು ಬಂದಿದ್ದು, ಎಸಿ ರೂಂನಲ್ಲಿ ಕುಳಿತು ನೆಲದ ಮೇಲೆ ಗುಟಕಾ ಉಗುಳಿದಲ್ಲದೇ ಪ್ರಶ್ನಿಸಿದ ವೇಟರ್ ಜತೆಗೆ ಜಗಳ ತೆಗೆದಿದ್ದಾರೆ. ನಂತರ ಎದ್ದು ಹೋಗುವಾಗ ಬಿಲ್ ಕೊಟ್ಟು ಹೋಗಿ ಎಂದಿದ್ದಕ್ಕೆ ಮಾಲಿಕರ ಸಹೋದರ ಶರಣು ಕಪನೂರ್ಗೆ ಪಿಸ್ತೂಲ್ ಮಾದರಿಯ ವಸ್ತು ತೋರಿಸಿ, ಅವಾಚ್ಯವಾಗಿ ಬೈದು ಬೆದರಿಕೆ ಒಡ್ಡಿ, ಕೊಲೆಗೆ ಯತ್ನಿಸಿದ್ದ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸಿಪಿ ಶರಣಪ್ಪ ಸುಬೇದಾರ, ಪಿಐ ಸತೀಶ ಕಣಮೇಶ್ವರ ನೇತೃತ್ವದಲ್ಲಿ ಸಿಬ್ಬಂದಿ ವೈಜನಾಥ, ಮಲ್ಲಿಕಾರ್ಜುನ, ಶಿವಪ್ರಕಾಶ, ಮುಜಾಹಿದ್, ನೀಲಕಂಠರಾಯ ಪಾಟೀಲ್, ಚಂದ್ರಶೇಖರ, ಹರಿಕಿಶೋರ ಅವರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.