ಕಲಬುರಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಗನವಾಡಿ ನೌಕರರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಎಸ್​.ವರಲಕ್ಷ್ಮೀ ಕರಪತ್ರ ಬಿಡುಗಡೆ ಮಾಡಿದರು. ಗೌರಮ್ಮ ಪಾಟೀಲ್​, ಶಾಂತಾ ಘಂಟಿ, ಎಂ.ಬಿ.ಸಜ್ಜನ್​, ಶ್ರೀಮಂತ ಬಿರಾದಾರ ಇತರರಿದ್ದರು. 
ಕಲಬುರಗಿ

ಜೀವಿಸಬೇಕೆಂದರೆ ವೇತನ ಹೆಚ್ಚಳ ಮಾಡಿ

ಕಲಬುರಗಿ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್​)ಗೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಮೊದಲಿನಂತೆ ಶೇ.90ಕ್ಕೆ ಹೆಚ್ಚಳ ಮಾಡುವ ಜತೆಗೆ ದೇಶದ 10.50 ಕೋಟಿ ಫಲಾನುಭವಿ ಮಕ್ಕಳಿಗೆ ಆಹಾರ ಮತ್ತು ಪೌಷ್ಟಿಕತೆ ಹಕ್ಕು ದೊರಕಿಸಿಕೊಡಲು ಯೋಜನೆ ಕಾಯಂಗೊಳಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್​.ವರಲಕ್ಷ್ಮೀ ಆಗ್ರಹಿಸಿದರು.

ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಂಗನವಾಡಿ ನೌಕರರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಐಸಿಡಿಎಸ್​ ಜಾರಿಗೊಂಡು 52 ವರ್ಷಗಳಾಗಿವೆ. ದೇಶದ ಮಕ್ಕಳಿಗೆ ಕಲಿಕೆಯ ಜತೆಗೆ ಪೌಷ್ಟಿಕ ಆಹಾರ ನೀಡುವ ಅಂಗನವಾಡಿ ಯೋಜನೆ ದುರ್ಬಲಗೊಳಿಸಲು ಕೇಂದ್ರ ಸರ್ಕಾರ 2018ರಿಂದ ಇದುವರೆಗೂ ಬಜೆಟ್​ನಲ್ಲಿ ಅನುದಾನ ಹೆಚ್ಚಳ ಮಾಡಿಲ್ಲ. ಹೀಗಾಗಿ ಈ ಕೂಡಲೇ ಹೆಚ್ಚಿನ ಅನುದಾನ ನೀಡುವುದರ ಜತೆಗೆ ತನ್ನ ಪಾಲು ಹೆಚ್ಚಿಸಬೇಕು, ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರಿಗೆ ಜೀವಿಸುವ ಹಕ್ಕು ಇಲ್ವಾ ? ನಾವು ಜೀವಿಸಬೇಕು ಎಂದರೆ ಪಗಾರ ಹೆಚ್ಚಳ ಮಾಡಿ. ಯೋಜನೆ ಕಾಯಂಗೊಳಿಸಿ, ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಶಾಸನಬದ್ಧ ಸೌಲಭ್ಯ ನೀಡಬೇಕು, ಕಾಯ್ದೆಯಂತೆ ಕನಿಷ್ಠ ವೇತನ ನೀಡಬೇಕು. ಆಹಾರ ಗುಣಮಟ್ಟ ಹೆಚ್ಚಿಸಲು ಯೂನಿಟ್​ ದರ ಹೆಚ್ಚಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನೇತೃತ್ವದ ಸಮಿತಿಯಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಕಾರ್ಮಿಕರು ಎಂದು ಪರಿಗಣಿಸಲು ಒಪ್ಪಿಗೆ ನೀಡಿದೆ. ಇನ್ನೊಂದೆಡೆ ನ್ಯಾಯಾಲಯವು ಯೋಜನೆಯಡಿ ಕೆಲಸ ಮಾಡುವರು ಮತ್ತು ಸರ್ಕಾರ ನಡುವಿನ ಸಂಬಂಧ ಮಾಲೀಕರು ಮತ್ತು ಕೆಲಸಗಾರರಂತಿದೆ ಎಂದಿದೆ. ಹೀಗಿದ್ದರೂ ಯಾಕೆ ಅನುದಾನ ಕಡಿತಗೊಳಿಸಲಾಗುತ್ತಿದೆ?, ಅದನ್ನು ಇಲಾಖೆಯಾಗಿ ಪರಿವರ್ತಿಸಲು ಯಾಕೇ ಹಿಂದೇಟು ಹಾಕಲಾಗುತ್ತಿದೆ ಎಂದು ಪ್ರಶ್ನಿಸಿದರು.

ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ್​, ಪ್ರಮುಖರಾದ ಎಂ.ಬಿ.ಸಜ್ಜನ್​, ಶಾಂತಾ ಂಟಿ, ಶ್ರೀಮಂತ ಬಿರಾದಾರ ಇತರರಿದ್ದರು.

ಫೆಬ್ರವರಿಯಲ್ಲಿ ಅಂಗನವಾಡಿ ಅನಿರ್ದಿಷ್ಟ ಬಂದ್​

ಬೆಲೆ ಏರಿಕೆಗೆ ತಕ್ಕಂತೆ ನೌಕರರ ವೇತನ ಹೆಚ್ಚಳ ಮಾಡುವುದು ಸೇರಿ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯುಸಿ ನೇತೃತ್ವದಲ್ಲಿ ದೆಹಲಿಯಲ್ಲಿ ಹೋರಾಟ ನಡೆಸಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಅಂಗನವಾಡಿಗಳನ್ನು ಅರ್ನಿದಿಷ್ಟಾವಧಿ ಬಂದ್​ ಮಾಡಿ ಹೋರಾಟ ಆರಂಭಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ತನ್ನ ಹೊಣೆಯಿಂದ ನುಣಚಿಕೊಳ್ಳಬಾರದು. ಗೌರವ ಧನ ಹೆಚ್ಚಳ ಮಾಡಲು ಮುಂದಾಗಬೇಕು ಎಂದು ವರಲಕ್ಷ್ಮೀ ಆಗ್ರಹಿಸಿದರು.

ಅಂಗನವಾಡಿ ನೌಕರರು ಕೆಳಹಂತದಲ್ಲಿ ಸರ್ಕಾರಿ ಯೋಜನೆ ಅನುಷ್ಠಾನಗೊಳಿಸುವ ಸಮರ್ಥರು ಎನ್ನುವ ಸರ್ಕಾರ ಸೌವಲತ್ತು ನೀಡುತ್ತಿಲ್ಲ. ಡಿಜಿಟಲೀಕರಣ ಮಾಡಿರುವುದರಿಂದ ಇಡೀ ದಿನ ಮೊಬೈಲ್​ನಲ್ಲಿ ಮಾಹಿತಿ ಅಪ್ಲೋಡ್​ ಮಾಡುವುದರಲ್ಲಿಯೇ ಹೋಗುತ್ತಿದೆ. ಹೀಗಾಗಿ ಮಕ್ಕಳ ಲಾಲನೆ, ಪಾಲನೆ, ಅವರ ಕಲಿಕೆಯತ್ತ ಗಮನ ಹರಿಸುವುದು ಆಗುತ್ತಿಲ್ಲ. ಹೀಗಾಗಿ ಅನ್ಯ ಕೆಲಸಗಳಿಗೆ ನಿಯೋಜಿಸುವುದು ನಿಲ್ಲಿಸಬೇಕು.
> ಎಸ್​.ವರಲಕ್ಷ್ಮೀ, ರಾಜ್ಯಾಧ್ಯಕ್ಷೆ, ಅಂಗನವಾಡಿ ನೌಕರರ ಸಂಘದ