ಚಿತ್ತಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಸಿರಿನುಡಿ ಸಂಭ್ರಮ-೨೦೨೫ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ನಾಗಯ್ಯ ಹಿರೇಮಠ ಉದ್ಘಾಟಿಸಿದರು. ವೀರಣ್ಣಗೌಡ ಪರಸರೆಡ್ಡಿ, ಶಶಿಧರ ಬಿರಾದಾರ, ವೀರೇಂದ್ರ ಕೊಲ್ಲೂರ, ಶಿವಾನಂದ ನಾಲವಾರ, ರವಿ ಎಸ್. ಕುಲಕರ್ಣಿ ಇದ್ದರು. 
ಕಲಬುರಗಿ

ಕನ್ನಡ ಉಳಿದ್ರೆ ನಾಡು ಉಳಿಯುತ್ತೆ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ನಾಗಯ್ಯ ಹಿರೇಮಠ ಅನಿಸಿಕೆ
  • ಎಸ್‌ಎಸ್‌ಕೆ ಶಾಲೆಯಲ್ಲಿ ಸಿರಿನುಡಿ ಸಂಭ್ರಮ ಕಾರ್ಯಕ್ರಮ
  • ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ
ಚಿತ್ತಾಪುರ: ಕನ್ನಡ ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ನಿರಂತರ ಮಾತನಾಡುತ್ತಾ, ಕಲಿಸುತ್ತಾ ಉಳಿಸಿದರೆ ಮಾತ್ರ ನಾಡು, ನುಡಿ ಉಳಿಯುತ್ತದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ವರುಣ ನಗರದಲ್ಲಿರುವ ಶ್ರೀಗುರು ರಾಘವೇಂದ್ರ ಟ್ರಸ್ಟ್ ದಿ.ಶೇಷಗಿರಿರಾವ ಎಸ್. ಕುಲಕರ್ಣಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಸಿರಿನುಡಿ ಸಂಭ್ರಮ-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದೆ ಎಂದು ಬಣ್ಣಿಸಿದರು.
ಸುಮಾರು ೨ ಸಾವಿರ ವರ್ಷಗಳ ಇತಿಹಾಸ ಕನ್ನಡ ಭಾಷೆಗಿದೆ. ಒಂದು ಕಾಲದಲ್ಲಿ ಉತ್ತರ ನರ್ಮದಾ ನದಿವರೆಗೂ ಕನ್ನಡಿಗರು ಆಳ್ವಿಕೆ ನಡೆಸಿದ್ದರು. ಕನ್ನಡಿಗರೇ ಹೆಚ್ಚಿರುವ ಸೊಲ್ಲಾಪುರ, ಕಾಸರಗೋಡು, ತಾಂಡೂರು, ಆಲೂರು ಮುಂತಾದ ಭೂ ಪ್ರದೇಶಗಳು ನಮ್ಮಿಂದ ದೂರವಾಗಿರುವುದು ನೋವಿನ ಸಂಗತಿ. ಭಾಷೆ ಕೇವಲ ಮಾತಿನ ಸಾಧನವಲ್ಲ. ಅದು ಸಂಸ್ಕೃತಿ ಮತ್ತು ಅಸ್ತಿತ್ವ. ಕನ್ನಡವನ್ನು ಮನೆಮಾತಾಗಿಸಬೇಕು ಎಂದು ಕರೆ ನೀಡಿದರು.
ರಾಯಚೂರ ಕೃಷಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನ ವೈಭವದಿಂದ ನಡೆಸಬೇಕಿದೆ, ಈ ನಿಟ್ಟಿನಲ್ಲಿ ನಿಯೋಗದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಚರ್ಚಿಸಬೇಕು. ಎಲ್ಲ ವಲಯ ಮಟ್ಟದ ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಹೆಚ್ಚಿಸಿ, ಪ್ರತಿವರ್ಷ ಕನಿಷ್ಠ ೩೦ ಮಂದಿ ಸಾಹಿತಿಗಳು ಸಮಾಜಕ್ಕೆ ದೊರಕುವಂತಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ಕನ್ನಡದ ಮೇಲಿನ ನಿರ್ಲಕ್ಷÈ ಸರಿಯಲ್ಲ. ಭಾಷೆ ತಾಯಿಯಾಗಿದ್ದು, ಪ್ರೀತಿಯಿಂದ ಪೋಷಿಸಬೇಕು. ನಿರ್ಲಕ್ಷÈ ಮಾಡಿದರೆ ಹೋರಾಟದ ಅಗತ್ಯ ಬರುತ್ತದೆ. ಕನ್ನಡ ಓದು, ಬರಹ ಕಡಿಮೆಯಾಗಬಾರದು, ಇದರಿಂದ ಭವಿಷ್ಯದಲ್ಲಿ ಸಾಹಿತಿಗಳ ಕೊರತೆ ಕಾಡುತ್ತದೆ ಎಂದು ಎಚ್ಚರಿಸಿದರು.
ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್, ಗೌರವಾಧ್ಯಕ್ಷ ವೀರೇಂದ್ರ ಕೊಲ್ಲೂರ, ಶ್ರೀಗುರು ರಾಘವೇಂದ್ರ ಟ್ರಸ್ಟ್ ಕಾರ್ಯದರ್ಶಿ ರವಿ ಎಸ್. ಕುಲಕರ್ಣಿ ಮಾತನಾಡಿದರು. 
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ಪ್ರಮುಖರಾದ ಚಂದ್ರಶೇಖರ ಲೇವಡಿ, ಮಹ್ಮದ್ ಇಬ್ರಾಹಿಂ, ವರುಣಕುಮಾರ ಕುಲಕರ್ಣಿ, ನರಸಿಂಹ ಆಲಮೇಲಕರ್, ಸಾಬಣ್ಣ ಮಾಸ್ಟರ್, ದೇವೇಂದ್ರಪ್ಪ ಶಹಾಬಾದ್, ಲಿಂಗಣ್ಣ ಮಲ್ಕನ್, ವೀರೇಶ ಮಕಾಪ್, ಅಂಬರೀಷ್ ಸುಲೇಗಾಂವ್, ಶ್ರೀಕಾಂತ ಸುಲೇಗಾಂವ್, ಕೋಟೇಶ್ವರ ರೇಷ್ಮಿ, ಆನಂದ ಪಾಟೀಲ್ ನರಿಬೋಳಿ, ಚಂದ್ರಶೇಖರ ಬಳ್ಳಾ, ಮಹೇಶ ಬಾಳಿ ಇತರರಿದ್ದರು.
ಕಾಶಿರಾಯ ಕಲಾಲ್ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಶ್ರೀ ಪ್ರಾರ್ಥಿಸಿದರು. ಲಲಿತಮ್ಮ ರೇಷ್ಮಿ ಸ್ವಾಗತಿಸಿದರು. ನರಸಪ್ಪ ಚಿನ್ನಕಟ್ಟಿ ನಿರೂಪಣೆ ಮಾಡಿದರು. ಸಂಗಮೇಶ ರೋಣದ ವಂದಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ

ಸಾಧಕರಾದ ಚಂದ್ರಶೇಖರ ಬಾಚನೂರು (ಕೃಷಿ), ಪ್ರತಿಕಾ (ನೃತ್ಯ), ಶಂಭುಲಿAಗ ವಿಶ್ವಕರ್ಮ (ಕಲೆ), ಸೋಮಶೇಖರ ಕಲಶೆಟ್ಟಿ (ಶಿಕ್ಷಣ), ಶರಣಪ್ಪ ಹಡಪದ (ನಾಟಕ), ಬಸವರಾಜ ಡೋಣಗಾಂವ (ಸಾಹಿತ್ಯ), ಅಯ್ಯಣ್ಣ ಮಾಸ್ಟರ್ (ಸಂಗೀತ), ನದೀಮ್‌ಸಾಬ್ ಹೊಸ್ಸೂರ್ (ಜಾನಪದ), ಉಮೇಶಬಾಬು ಸಾಸಬಾಳ (ಚಿತ್ರಕಲೆ), ನರಸಿಂಹ ಕುಲಕರ್ಣಿ (ಸಾಮಾಜಿಕ) ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಗಮನಸೆಳೆದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಭಾಗ್ಯಶ್ರೀ (ಪ್ರ), ಎಸ್‌ಎಸ್‌ಕೆ ಪ್ರೌಢಶಾಲೆಯ ಸಿದ್ದಮ್ಮ (ದ್ವಿ), ಸರ್ಕಾರಿ ಆದರ್ಶ ವಿದ್ಯಾಲಯದ ನಂದೀಶ (ತೃ)ಗೆ ಕ್ರಮವಾಗಿ ೧೫೦೦, ೧೦೦೦ ಹಾಗೂ ೫೦೦ ರೂ. ಮತ್ತು ಪ್ರಶಸ್ತಿಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
"

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಮತ್ತು ಸಾಹಿತ್ಯ ಕೃಷಿಯನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಪರಿಷತ್ ಇನ್ನಷ್ಟು ಚುರುಕಾಗಿ ಕೆಲಸ ನಡೆಸಲಿದೆ. `ಸಾಹಿತ್ಯ ನಡೆ ನಿಮ್ಮ ಕಡೆ` ಕಾರ್ಯಕ್ರಮದ ರೂಪುರೇಷೆ ಈಗಾಗಲೇ ಸಿದ್ಧವಾಗಿದೆ. ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು.

 | ವೀರಭದ್ರಪ್ಪ ಗುರುಮಿಠಕಲ್, ತಾಲೂಕು ಅಧ್ಯಕ್ಷ, ಕಸಾಪ