ಕಲಬುರಗಿ ಸಿಯುಕೆನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನದ ತರಬೇತಿ ಕಾರ್ಯಕ್ರಮಕ್ಕೆ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಚಾಲನೆ ನೀಡಿದರು. ಪ್ರೊ.ಪವಿತ್ರಾ ಆಲೂರ, ಪ್ರೊ.ಚನ್ನವಿರ ಆರ್​.ಎಂ., ಡಾ.ಪ್ರಕಾಶ ಯಾದವ್​, ಡಾ.ಹರೀಶಕುಮಾರ್​ ಚೌಧರಿ ಇತರರಿದ್ದರು. 
ಕಲಬುರಗಿ

ಪರಿಣಾಮಕಾರಿ ಪ್ರಗತಿಗೆ ಆದ್ಯತೆ ಗುರುತಿಸುವಿಕೆ ಅಗತ್ಯ

ಕಲಬುರಗಿ: ಪರಿಣಾಮಕಾರಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸುವಲ್ಲಿ ಸ್ಥಳಿಯ ಅಗತ್ಯ, ಲಭ್ಯವಿರುವ ಸಂಪನ್ಮೂಲ ಹಾಗೂ ಜನರ ಆದ್ಯತೆ ಗುರುತಿಸುವುದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದ ಕುಲಸಚಿವ ಪ್ರೊ.ಆರ್​.ಆರ್​. ಬಿರಾದಾರ್​ ಹೇಳಿದರು.

ಸಿಯುಕೆಯಲ್ಲಿ ಸಮಾಜ ಮತ್ತು ವರ್ತನಾ ವಿಜ್ಞಾನಗಳ ನಿಕಾಯದಿಂದ ವಿಕಸಿತ ಗ್ರಾಮ ಅಭಿವೃದ್ಧಿಗಾಗಿ ಸೂಕ್ಷ್ಮ ಮಟ್ಟದ ಯೋಜನೆ ಕುರಿತು ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಸಮುದಾಯಗಳ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆಗೆ ಸೂಕ್ಷ್ಮ ಸಾಲ ಪ್ರಮುಖ ಸಾಧನವಾಗಬಲ್ಲದು. ಸರ್ಕಾರಿ ಯೋಜನೆಗಳ ಪ್ರಯೋಜನ ಅರ್ಹರಿಗೆ ತಲುಪುವಂತೆ ಮಾಡುವ ಅಗತ್ಯದ ಬಗ್ಗೆ ವಿವರಿಸಿದರು.

ಸಮಾಜ ಮತ್ತು ವರ್ತನಾ ವಿಜ್ಞಾನಗಳ ನಿಕಾಯ ಡೀನ್​ ಪ್ರೊ.ಪವಿತ್ರಾ ಆಲೂರ ಅವರು ಸಮಾಜಕಾರ್ಯ ಶಿಕ್ಷಣ ಮತ್ತು ಕ್ಷೇತ್ರ ಕಾರ್ಯದಲ್ಲಿ ಸಹಭಾಗಿತ್ವದ ಯೋಜನೆಯ ಪ್ರಸ್ತುತತೆ ಕುರಿತು ಹೇಳಿದರು.

ಹಿರಿಯ ಪ್ರಾಧ್ಯಾಪಕ ಪ್ರೊ.ಚನ್ನವಿರ ಆರ್​.ಎಂ. ಅವರು ಸಮುದಾಯ ಸಂಘಟನೆ ಮತ್ತು ಅಭಿವೃದ್ಧಿಯಲ್ಲಿ ಸಹಭಾಗಿತ್ವದ ಗ್ರಾಮೀಣ ಮೌಲ್ಯಮಾಪನ ಹಾಗೂ ವಿಧಾನಗಳ ಮಹತ್ವದ ಕುರಿತು ಬೆಳಕು ಚೆಲ್ಲಿದರು.

ಪಿಆರ್​ಎ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದ ಸಂಪನ್ಮೂಲ ವ್ಯಕ್ತಿ ಡಾ.ಪ್ರಕಾಶದವ್​ ಅವರು ತಾಂತ್ರಿಕ ಅವಧಿ ನಡೆಸಿಕೊಟ್ಟರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಹರೀಶಕುಮಾರ್​ ಚೌಧರಿ ಕಾರ್ಯಕ್ರಮ ಸಂಯೋಜಿಸಿದ್ದರು. ಡಾ.ಲಕ್ಷ್ಮಣ ಜಿ, ಡಾ.ಚಿತ್ಕಳಾ ವೆಂಕಾರೆಡ್ಡಿ ಇತರರಿದ್ದರು. ತರಬೇತಿ ಭಾಗವಾಗಿ ವಿದ್ಯಾರ್ಥಿಗಳು ಗ್ರಾಮಗಳಿಗೆ ಭೇಟಿ ನೀಡಿ ಸಮುದಾಯಗಳೊಂದಿಗೆ ಸಂವಾದ ನಡೆಸಿ ವಿವಿಧ ಪಿಆರ್​ಎ ಸಾಧನಗಳನ್ನು ಪ್ರಾಯೋಗಿಕವಾಗಿ ಬಳಸಿದರು. ಸಮುದಾಯದ ಅಗತ್ಯ ಮತ್ತು ಸಂಪನ್ಮೂಲ ಗುರುತಿಸಿ ಗ್ರಾಮ ಮಟ್ಟದ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವ ಪ್ರಾಯೋಗಿಕ ಅನುಭವ ಪಡೆದರು.

ಸಾಮಾಜಿಕ ಹಾಗೂ ಸಂಪನ್ಮೂಲ ನಕ್ಷೆ ರಚನೆ, ಸಂದರ್ಭಕ್ಕಾನುಸಾರ ಚಟುವಟಿಕೆ ಪಟ್ಟಿ ಮತ್ತು ಜೋಡಿ ಶ್ರೇಯಾಂಕ ಪದ್ಧತಿ ಸೇರಿ ಪ್ರಮುಖ ಪಿಆರ್​ಎ ಸಾಧನಗಳ ಕುರಿತು ತರಬೇತಿ ನೀಡಲಾಯಿತು.

ಗ್ರಾಮಗಳ ವಾಸ್ತವಿಕ ಅಗತ್ಯ ಮತ್ತು ಸಂಪನ್ಮೂಲ ಆಧರಿಸಿದ ಅಭಿವೃದ್ಧಿ ಕ್ರಮ ಸರ್ಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನೆರವಾಗುವುದರ ಜತೆಗೆ ಗ್ರಾಮೀಣ ಪ್ರದೇಶದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಭದ್ರ ಬುನಾದಿ ಒದಗಿಸಬಲ್ಲವು.
> ಪ್ರೊ.ಆರ್​.ಆರ್​.ಬಿರಾದಾರ್​ ಕುಲಸಚಿವ, ಸಿಯುಕೆ