ಕಲಬುರಗಿ: ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾದ ರಾಘವ್ ಚೈತನ್ಯ ಶಿವಲಿಂಗ ವಿವಾದದ ಬೆನ್ನಲ್ಲೇ, ಈಗ ಜಿಲ್ಲಾ ಕೇಂದ್ರದ ಐತಿಹಾಸಿಕ ಕಲಬುರಗಿ ಕೋಟೆಯ ಆವರಣದಲ್ಲಿರುವ ಶ್ರೀ ಸ್ವಯಂಭೂ ಸೋಮೇಶ್ವರ ದೇವಾಲಯದ ವಿವಾದ ಮುನ್ನೆಲೆಗೆ ಬಂದಿದೆ. ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಮುಂದಾದ ನೂರಾರು ಹಿಂದೂ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದ ಘಟನೆ ಭಾನುವಾರ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಶಿವರಾತ್ರಿ ಹಿನ್ನೆಲೆಯಲ್ಲಿ ಕೋಟೆಯೊಳಗಿನ ಸೋಮೇಶ್ವರ ದೇವಸ್ಥಾನಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಲು ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಜರಂಗದಳದ ಕಾರ್ಯಕರ್ತರು ನಿರ್ಧರಿಸಿದ್ದರು. ಆದರೆ, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸ್ ಇಲಾಖೆ, ಕೋಟೆಯ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಹಾಕಿ ಕೋಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು. ಕೋಟೆಯೊಳಗೆ ಯಾರನ್ನೂ ಬಿಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.
ನಡುರಸ್ತೆಯಲ್ಲೇ ಆಕ್ರೋಶ, ಧಿಕ್ಕಾರ:
ಬೆಳಗ್ಗೆಯಿಂದಲೇ ಕೋಟೆ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು 'ಹರ್ ಹರ್ ಮಹದೇವ್', 'ಓಂ ನಮಃ ಶಿವಾಯ' ಹಾಗೂ ಬಜರಂಗದಳದ ಪರ ಘೋಷಣೆಗಳನ್ನು ಕೂಗಿದರು. ಪೊಲೀಸರು ಪೂಜೆಗೆ ಅವಕಾಶ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಕಾರ್ಯಕರ್ತರು ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಇದು ಕೆಲ ಕಾಲ ಸಂಚಾರ ವ್ಯತ್ಯಯಕ್ಕೂ ಕಾರಣವಾಯಿತು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಪೊಲೀಸರು ಪ್ರತಿಭಟನಾ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇವರನ್ನು ಪೊಲೀಸರು ಬಸ್ ಮೂಲಕ ಕಲಬುರಗಿ ಹೊರವಲಯದ ಫರತಹಬಾದ್ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ಬಿಡುಗಡೆಗೊಳಿಸಿದರು.
ಈ ಹೋರಾಟದಲ್ಲಿ ಪ್ರಮುಖರಾದ ದಿವ್ಯಾ ಹಾಗರಗಿ, ಸಾಗರ್ ರಾಠೋಡ್, ಶಶಿಕುಮಾರ್ ಶೆಟ್ಟಿ, ಪ್ರಶಾಂತ್ ಜಾಧವ, ಪವನ್ ಪೂಜಾರಿ, ಅಣ್ಣರಾವ್ ಪಾಟೀಲ್, ಭಾರತ್ ಮಡಿವಾಳ, ಅಭಿಷೇಕ್ ಕನಸುರೆ, ದಿಲೀಪ್ ಕನಸುರೆ, ನಾಗರಾಜ್ ಕಾನೂರ್, ನಿತೀನ್ ಠಾಕೂರ್, ನಾಗರಾಜ್ ವೀರನಾಯಕ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ನಾವು ವರ್ಷಗಳಿಂದ ಶಿವರಾತ್ರಿಯಂದು ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದೇವೆ. ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಶಾಂತಿಯುತವಾಗಿ ಧಾರ್ಮಿಕ ಆಚರಣೆಗೆ ಮುಂದಾದವರನ್ನು ಏಕಪಕ್ಷೀಯವಾಗಿ ಬಂಧಿಸಿರುವುದು ಅಸ್ವೀಕಾರ್ಯ. ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ಕ್ರಮದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ.
- ದಿವ್ಯಾ ಹಾಗರಗಿ, ಹಿಂದೂ ಮುಖಂಡೆ