ಕಲಬುರಗಿ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ಹೈಟೆಕ್ ಕಿಚನ್‌ಗೆ ಸೋಮವಾರ ಚಾಲನೆ ನೀಡಿದ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಸತ್ಕರಿಸಿದರು. ಬಸವರಾಜ ದೇಶಮುಖ, ಶಿವಾನಿ ಮತ್ತು ಭವಾನಿ ಅಪ್ಪ ಇತರರಿದ್ದರು.
- ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆ
ಕಲಬುರಗಿ: ನಗರದ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಸುಸಜ್ಜಿತ, ಹೊಸದಾಗಿ ನಿರ್ಮಿಸಿದ ಹೈಟೆಕ್ ಕಿಚನ್‌ಗೆ ಸುತ್ತೂರು ಮಠದ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸೋಮವಾರ ಚಾಲನೆ ನೀಡಿದರು.
ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶರಣಬಸವೇಶ್ವರ ಸಂಸ್ಥಾನದ ೯ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರೊಂದಿಗೆ ಸುತ್ತೂರು ಮಠದ ಶ್ರೀಗಳು ನೂತನ ಅಡುಗೆಮನೆಗೆ ಚಾಲನೆ ನೀಡಿದರು.
ಇದು ಕಳೆದ ೨೦೦ ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಅಡುಗೆಮನೆಯಾಗಿದ್ದು, ಅನ್ನ ದಾಸೋಹಕ್ಕಾಗಿ ಆಹಾರ ಬೇಯಿಸುವ ಮೂಲಕ ದೇಗುಲಕ್ಕೆ ಆಗಮಿಸುವ ಭಕ್ತರ ಹಸಿವು ನೀಗಿಸುತ್ತಿದೆ.
ಈ ಹೈಟೆಕ್ ಅಡುಗೆಮನೆಯು ೧೧ ಬೃಹತ್ ಅಡುಗೆ ಪಾತ್ರೆಗಳನ್ನು ಹೊಂದಿದ್ದು, ೩೦ ಕೆಜಿಯಿಂದ ೧ ಕ್ವಿಂಟಾಲ್‌ವರೆಗೆ ಅನ್ನ, ಸಾಂಬಾರ್ ಮತ್ತು ಸಜ್ಜಕ ಸೇರಿ ಇತರ ಆಹಾರ ಬೇಯಿಸುವ ಸಾಮರ್ಥ್ಯ ಹೊಂದಿದೆ. ಈ ಅಡುಗೆಮನೆಯು ಹಗಲಿನಲ್ಲಿ ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ರಾತ್ರಿಯಲ್ಲಿ ಇದನ್ನು ಎಲ್‌ಪಿಜಿಯಿಂದ ನಿರ್ವಹಿಸಲಾಗುತ್ತದೆ. ಒಂದು ಗಂಟೆಯಲ್ಲಿ ೫೦೦೦ ರಿಂದ ೬೦೦೦ ಜನರಿಗೆ ಆಹಾರ ತಯಾರಿಸುವ ಸಾಮರ್ಥ್ಯ ಹೊಂದಿದೆ.
ಆಧುನಿಕ ಅಡುಗೆಮನೆಯ ಉದ್ಘಾಟನೆಯಿಂದ, ದಾಸೋಹ ಮಹಾಮನೆಯಲ್ಲಿ ಬಡಿಸುವ ಆಹಾರವನ್ನು ಅಡುಗೆ ಮಾಡುವ ಪ್ರಕ್ರಿಯೆ ಸುಲಭಗೊಳಿಸುತ್ತದೆ. ಕನಿಷ್ಠ ವೆಚ್ಚದಲ್ಲಿ ಆರೋಗ್ಯಕರ ಅಡುಗೆ ತಯ್ಯಾರಿಸಲಾಗುತ್ತದೆ.
ಕುಮಾರಿ ಭವಾನಿ ಎಸ್ ಅಪ್ಪಾ, ಶಿವಾನಿ ಎಸ್ ಅಪ್ಪಾ ಮತ್ತು ಮಹೇಶ್ವರಿ ಎಸ್ ಅಪ್ಪಾ, ಡಾ. ಅಲ್ಲಮಪ್ರಭು ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅನಿಲಕುಮಾರ ಬಿಡವೆ ಇತರರಿದ್ದರು.