ಕಲಬುರಗಿ: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ದ್ವಿಚಕ್ರ ವಾಹನಗಳ ಅಪಘಾತದಿಂದ ಸಾವುಗಳನ್ನು ತಡೆಯಲು, ವಾಹನ ದಟ್ಟಣೆ, ಸುರಕ್ಷತೆ ದೃಷ್ಟಿಯಿಂದ ಗುರುವಾರದಿಂದ (ಮಾರ್ಚ್ 05) ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
2025ರಲ್ಲಿ ನಗರದ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯದಿಂದಲೇ 64 ಜನರು ಮೃತಪಟ್ಟಿದ್ದಾರೆ. ಜನರ ಜೀವ ಉಳಿಸಬೇಕು, ಸಂಚಾರ ನಿಯಮ ಪಾಲಿಸಬೇಕು ಎಂದು ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದೆ. ದ್ವಿಚಕ್ರ ವಾಹನ ಸವಾರಿಗೆ ಹೆಲ್ಮೆಟ್ ಕಡ್ಡಾಯ ನಿಯಮ ಮಾಡಿ, ಹಲವು ವರ್ಷಗಳಾಗಿವೆ. ಬಿಸಿಲಿನ ತಾಪವೆಂದು ನಿಯಮ ಸಂಪೂರ್ಣ ಜಾರಿ ಆಗಿರಲಿಲ್ಲ
ಇತ್ತೀಚಿನ ದಿನಗಳಲ್ಲಿ ಅಪಘಾತ ಮತ್ತು ತಲೆಗೆ ಪೆಟ್ಟು ಬಿದ್ದು, ಮೃತರ ಸಂಖ್ಯೆ ಹೆಚ್ಚುತ್ತಿರುವುದು ಗಮನಿಸಿ, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರ ಮುಂದಾಳತ್ವದಲ್ಲಿ ಹಲವು ಸಭೆ ನಡೆಸಿ, ಹೆಲ್ಮೆಟ್ ಕಡ್ಡಾಯಕ್ಕೆ ನಗರ ಪೊಲೀಸರು ನಿರ್ಧರಿಸಿದ್ದಾರೆ. ಸಾರ್ವಜನಿಕರು ಪಾಲಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿದರೆ ಮಾತ್ರ ದಟ್ಟಣೆ ಸೇರಿ ಎಲ್ಲ ಸಂಚಾರ ಸಮಸ್ಯೆಗಳಿಗೆ ಭಾಗಶ@ ಪರಿಹಾರ ದೊರೆಯಲಿದೆ. ನಾವೆಷ್ಟೇ ದಂಡ ಹಾಕಿದರೂ ತಪ್ಪು ಮರುಕಳಿಸುತ್ತಿವೆ. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ಸಂಚಾರ ದೀಪ ಮುಗಿಯುವ ಮುನ್ನ ವಾಹನ ಚಾಲನೆ, ಒಂದು ಮಾರ್ಗದಲ್ಲಿ ಚಲನೆ ಸೇರಿ ವಿವಿಧ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಾಗೃತಿ, ಹಾಕದಿದ್ದರೆ ದಂಡ: ಹೆಲ್ಮೆಟ್ ಕಡ್ಡಾಯ ಮಾಡಿದ್ದು, ಈಗಾಗಲೇ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಮಾ.5ರಿಂದ ಎಲ್ಲರಿಗೂ ಕಡ್ಡಾಯ ಮಾಡಲಿದ್ದು, ಆರಂಭದಲ್ಲಿ ನಿಯಮ ಪಾಲಿಸದವರಿಗೆ ಜಾಗೃತಿ ಮೂಡಿಸಿ, ಹೆಲ್ಮೆಟ್ ಕೊಡಿಸಲು ಪ್ರಯತ್ನಿಸಲಾಗುವುದು. ನಂತರ ಕಾನೂನಿನಂತೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಡೀ ಕಲಬುರಗಿ ನಗರ ಸುತ್ತಾಡಿದರೂ ಯಾವುದೇ ದ್ವಿಚಕ್ರ ವಾಹನ ಸವಾರ 10ರಿಂದ 15 ನಿಮಿಷ ಸಂಚಾರ ಮಾಡಬಹುದು. ಹೆಲ್ಮೆಟ್ ಹೇರಿಕೆ ಅಲ್ಲ, ಅದು ಜೀವ ಉಳಿಸುವ ಸಾಧನ. ಮಾ.5ರಿಂದ ಹೆಲ್ಮೆಟ್ ಕಡ್ಡಾಯ ಅನುಷ್ಠಾನವಾಗಲಿದೆ. ಹೆಲ್ಮೆಟ್ ಧರಿಸದವರಿಗೆ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ, ನಂತರ ದಂಡ ವಿಧಿಸಲಾಗುವುದು. ಎಲ್ಲರೂ ಹೆಲ್ಮೆಟ್ ಧರಿಸಿ, ಜೀವ ಉಳಿಸಬೇಕು. ಪೊಲೀಸ್ರಿಗೆ ಸಹಕಾರ ನೀಡಬೇಕು.