- ಬೀಳುವ ಸ್ಥಿತಿಯಲ್ಲಿ ಗಾರಂಪಳ್ಳಿ ಸೇತುವೆ
ಚಿಂಚೋಳಿ: ತಾಲೂಕಿನಾದ್ಯಂತ ಭೀಕರ ಬಿಸಿಲಿನ ತಾಪಮಾನಕ್ಕೆ ಬೇಸತ್ತು ಹೋದ ಜನತೆಗೆ ಮಂಗಳವಾರ ಮಧ್ಯರಾತ್ರಿ ಎಲ್ಲೆಡೆ ಎಡಬಿಡದೆ ಗುಡುಗು, ಸಿಡಿಲು, ಮಿಂಚು ಬಿರುಗಾಳಿಯೊಂದಿಗೆ ಧಾರಾಕಾರ ಮಳೆಗೆ ವಿವಿಧ ಹಳ್ಳ, ಕೊಳ್ಳಗಳು ತುಂಬಿ ಹರಿದಿದ್ದು, ವಿವಿಧ ತೋಟಗಾರಿಕೆ ಬೆಳೆಗಳು ಹಾನಿಯಾದ ವರದಿಯಾಗಿದೆ.
ಅವಳಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಮುಖ್ಯ ರಸ್ತೆಯ ಮೇಲೆ ನೀರು ಆವರಿಸಿಕೊಂಡಿದ್ದು, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಅವರೇ ಫಿಲ್ಡಿಗಿಳಿದು ನೀರು ಹೊರ ಹಾಕಲು ಹರಸಾಹಸ ಪಟ್ಟರು.
ಚಂದಾಪುರದ ವಾಲ್ಮೀಕಿ ನಗರದಲ್ಲಿ ಚರಂಡಿಗಳು ಸ್ವಚ್ಚಗೊಳಿಸದ ಕಾರಣ ಚರಂಡಿಯ ನೀರು ರಸ್ತೆಯ ಮೇಲೆ ಹರಿದು ಗಬ್ಬು ನಾರುವಂತಾಯಿತು.
ಗಾರಂಪಳ್ಳಿ ಗ್ರಾಮದ ಸೇತುವೆ ಅನಾಹುತದ ಅಂಚಿನಲ್ಲಿದ್ದು, ಮೇಲ್ದರ್ಜೆಗೆರಿಸುವಂತೆ ಹೋರಾಟಗಳು ನಡೆಸಿ ವರ್ಷಗಳೆ ಕಳೆದಿವೆ. ಈ ಹಿಂದೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭನ್ವರಸಿಂಗ್ ಮೀನಾ ಅವರು ಭೇಟಿ ನೀಡಿ ಕ್ರಿಯಾಯೋಜನೆ ರೂಪಿಸಿ ಶೀಘ್ರವೇ ಸೇತುವೆ ಮೇಲ್ದರ್ಜೆಗೆರಿಸುವ ಭರವಸೆ ನೀಡಿ ವರ್ಷ ಕಳೆದರು. ಇಂದಿಗೂ 15 ಕೋಟಿ ಕ್ರಿಯಾಯೋಜನೆ ಅನುಮೋದನೆಗೊಳ್ಳದೆ ನೆನೆಗುದಿಗೆ ಬಿದ್ದಿದ್ದು, ಇದೀಗ ಮುಂಗಾರಿನ ರೋಹಿಣಿ ಮಳೆಗೆ ಸೇತುವೆ ಬಿರುಕು ಬಿಳುತ್ತಿದ್ದು, ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಆಹ್ವಾನಿಸುವಂತಾಗಲಿದ್ದು, ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಹಾರಕ್ಕೆ ಮುಂದಾಗಬೇಕು ಎಂಬುದೇ ಗ್ರಾಮಸ್ಥರ ಆಗ್ರಹವಾಗಿದೆ.
ಮಳೆಯ ಪ್ರಮಾಣ : ಚಿಂಚೋಳಿ ತಾಲೂಕಿನಾದ್ಯಂತ ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಬೆಳಗ್ಗೆ 11 ಗಂಟೆಯ ವರೆಗೆ ಸುರಿದ ಧಾರಾಕಾರ ಮಳೆಯು
ಚಿಂಚೋಳಿ 48.8ಮೀ ಮೀ, ಕುಂಚಾವರಂ 80.4ಮೀಮೀ, ಐನಾಪುರ 15.5ಮೀಮೀ
ಸುಲೇಪೇಟ 38.6ಮೀಮೀ, ಚಿಮ್ಮನಚೋಡ 18.0ಮೀಮೀ, ನೀಡಗುಂದಾ 54.0ಮೀಮೀ ಮಳೆಯಾದ ವರದಿಯಾಗಿದೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.