lokayukta trap 
ಕಲಬುರಗಿ

ಲೋಕಾ ಬಲೆಗೆ ಹಾಗರಗಾ ಗ್ರಾಪಂ ಕಾರ್ಯದರ್ಶಿ

ಕಲಬುರಗಿ:

ಮೃತ ವ್ಯಕ್ತಿಯ ಹೆಸರಿನಲ್ಲಿದ್ದ ನಿವೇಶನ ಅವರ ಪತ್ನಿ ಹೆಸರಿಗೆ ಖಾತೆ ವರ್ಗಾವಣೆಗೆ 9,950 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ತಾಲೂಕಿನ ಹಾಗರಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೇದಾಂಗನನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಾ ಸಮೇತ ಬಂಧಿಸಿದ್ದಾರೆ.

ಮುಂಬೈನಲ್ಲಿ ನೆಲೆಸಿರುವ 65 ವರ್ಷದ ದಸ್ಮಾಬಾಯಿ ಅವರ ಪತಿ ಕಿಶನ್​ ಪವಾರ್​ ನಿಧನರಾಗಿದ್ದು, ಕಲಬುರಗಿ ತಾಲೂಕಿನ ಹಾಗರಗಾ ಗ್ರಾಪಂ ವ್ಯಾಪ್ತಿಯ ಆಜಾದ್​ಪುರದ ಸರ್ವೇ 111/1ರಲ್ಲಿರುವ ಖುಲ್ಲಾ ನಿವೇಶನ ಸಂಖ್ಯೆ 12 ಕಿಶನ್​ ಪವಾರ್​ ಹೆಸರಿನಲ್ಲಿತ್ತು. ವಯೋಸಹಜ ಕಾರಣದಿಂದ ದಸ್ಮಾಬಾಯಿ ಅವರಿಗೆ ಓಡಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ತಮ್ಮ ಪತಿಯ ಹೆಸರಿನಲ್ಲಿದ್ದ ನಿವೇಶನವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡುವಂತೆ ಅಳಿಯ ಸಂಜೀವಗೆ ಸೂಚಿಸಿದ್ದರು.
ಸಂಜೀವ ಅಗತ್ಯ ದಾಖಲೆ, ಕಿಶನ್​ ಪವಾರ್​ ಮರಣ ಪ್ರಮಾಣಪತ್ರ ಹಾಗೂ ಇತರೆ ದಾಖಲೆಯೊಂದಿಗೆ ಖಾತೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಗ್ರಾಪಂ ಕಾರ್ಯದರ್ಶಿ ವೇದಾಂಗರನ್ನು ಸಂಪರ್ಕಿಸಿದ್ದರು. ಆರೋಪಿಯು ಖಾತೆ ವರ್ಗಾವಣೆಗೆ 9,950 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಈ ಬಗ್ಗೆ ಸಂಜೀವ ಲೋಕಾಯುಕ್ತ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು, ದೂರುದಾರರಿಂದ 9,950 ರೂ. ನಗದು ಹಣ ಲಂಚವಾಗಿ ಸ್ವೀಕರಿಸುತ್ತಿದ್ದ ವೇಳೆ ವೇದಾಂಗನನ್ನು ಬಂಧಿಸಿದ್ದಾರೆ.
ಕಲಬುರಗಿ ಲೋಕಾಯುಕ್ತ ಪೊಲೀಸ್​ ಅಧೀಕ್ಷಕ ಸಿದ್ಧರಾಜು ಸಿ. ಮಾರ್ಗದರ್ಶನದಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ ರವಿ ಪವಾರ ನೇತೃತ್ವದ ತಂಡ ದಾಳಿ ನಡೆಸಿತ್ತು.