ಕಲಬುರಗಿ: ರಾಜಕಾರಣಿಗಳು ದೇಶವನ್ನು ಹಾಳುಗೆಡವುತ್ತಿದ್ದು, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಸುಳ್ಳಿನ ರಾಜಕಾರಣ ನಡೆಯುತ್ತಿದೆ. ಧರ್ಮ, ಜಾತಿ ಹೆಸರಲ್ಲಿ ರಾಜಕಾರಣವಿದ್ದು, ಜೆನ್&ಜಿ ಹೆಸರಿನಲ್ಲಿ ಯುವಕರನ್ನು ಹುಚ್ಚೆಬ್ಬಿಸಲಾಗುತ್ತಿದೆ. ಯುವಕರು ಎಚ್ಚರದಿಂದ ಇರಬೇಕು ಎಂದು ನಟ ಪ್ರಕಾಶ ರಾಜ್ ಹೇಳಿದರು.
ಗುಲ್ಬರ್ಗ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2025&26ನೇ ಶೈಕ್ಷಣಿಕ ಸಾಲಿನ ಗುವಿವಿ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಧರ್ಮ, ಜಾತಿಯ ಗೊಡವೇ ಇಲ್ಲದೆ, ಸುಳ್ಳುಗಳಿಲ್ಲದ , ಪ್ರೀತಿಯನ್ನು ಬಿತ್ತುವ ತಲೆಮಾರುಗಳನ್ನು ಸೃಷ್ಟಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸುಳ್ಳಿನ ಮಾರುಕಟ್ಟೆಯ ಪ್ರಪಂಚದಲ್ಲಿ ನಾವಿದ್ದು, ಬಡವ ಶ್ರೀಮಂತನನ್ನು ಬ್ರಾ$್ಯಂಡ್ ಮೇಲೆ ಅಳೆಯಲಾಗುತ್ತಿದೆ. ಅಂತೆ, ಕಂತೆ ಸುಳ್ಳಿನಿಂದ ಹೊರ ಬರಬೇಕು. ರಾಜಕಾರಣ ಧರ್ಮದ ಮೇಲೆ ಸಾಗಿದ್ದು, ಅಪಾಯಕಾರಿ. ಲೈಕ್, ಡಿಸ್ಲೈಕ್ನಿಂದ ಭವಿಷ್ಯ ಕಟ್ಟಿಕೊಳ್ಳಲು ಆಗಲ್ಲ. ನೆರೆ ಹೊರೆಯವರ ಜತೆ ಬೆರೆಯಬೇಕು. ಕ್ರಿಕೆಟ್ ಆಡಬೇಕು, ನೋಡುವುದಷ್ಟೇ ಅಲ್ಲ ಎಂದರು.
ಗುಲ್ಬರ್ಗ ವಿವಿ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಮಾತನಾಡಿ, ಮೂರು ದಿನ ಜ್ಞಾನಗಂಗಾ ಆವರಣದಲ್ಲಿ ಯುವ ಉತ್ಸವದಲ್ಲಿ ವಿದ್ಯಾರ್ಥಿಗಳ ಸ್ಫರ್ಧಾ ಮನೋಭಾವದಿಂದ ಭಾಗವಹಿಸಬೇಕು. ಅಡಗಿರುವ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ಇದಾಗಿದೆ. ವಿದ್ಯಾರ್ಥಿಗಳು ಪರಸ್ಪರ ಕಲೆ, ಅಭಿನಯವನ್ನು ಪ್ರೋತ್ಸಾಹಿಸಬೇಕು ಎಂದರು.
ವಿವಿ ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ.ಕೆ.ಸಿದ್ದಪ್ಪ, ಸಿಂಡಿಕೇಟ್ ಸದಸ್ಯ ರಾವೇಂದ್ರ ಭೈರಪ್ಪ, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ ಇತರರಿದ್ದರು. ಕುಲಸಚಿವ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ರಮೇಶ ಲಂಡನಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಎಲ್ಲ ಕಪ್ಪೆಗಳನ್ನು ತಿನ್ನುವ ಹಾವು ಬಿಜೆಪಿ: ವೈಮನಸ್ಸು ಇದ್ದರೆ ನಾವು ನಾವೇ ಬಗೆಹರಿಸಿಕೊಳ್ಳಬೇಕು. ರಾಜಕಾರಣಿಗಳು ನಮ್ಮಲ್ಲಿ ಸಿದ್ಧಾಂತ ತುಂಬುತ್ತಾರೆ. ನಮ್ಮಲ್ಲಿ ನಾವು ಜಗಳ ಆಗಬೇಕು. ಬಾವಿಯಲ್ಲಿ ಕಪ್ಪೆಗಳ ಸಾಮ್ರಾಜ್ಯ ಇರುತ್ತದೆ. ಹೊರಗೆ ಹೋಗಲು, ಬರಲು ಕಪ್ಪೆಗೆ ಮಾತ್ರ ದಾರಿ ಗೊತ್ತಿರುತ್ತದೆ. ಒಂದು ಕಪ್ಪೆ ರಾಜನಾಗಲು ಹೊರಗೆ ಹೋಗಿ, ಬೆಂಬಲಕ್ಕೆ ಹಾವನ್ನು ಕರೆ ತರುತ್ತದೆ. ಬಿಜೆಪಿಗರು ತಂದಂತೆ. ಆ ಹಾವು ಎಲ್ಲ ಕಪ್ಪೆಗಳನ್ನು ತಿನ್ನುತ್ತದೆ. ನಂತರ ಎಲ್ಲವನ್ನು ಆವರಿಸಿಕೊಳ್ಳುತ್ತದೆ. ಸರ್ವಜನಾಂಗದ ಶಾಂತಿ ತೋಟದಲ್ಲಿ ನಮ್ಮ ಅಂಬೇಡ್ಕರ್, ಬಸವ, ಗಾಂಧಿ, ನಮ್ಮ ಸಂವಿಧಾನ ಇದಷ್ಟೇ ಇರಲಿ. ಇದನ್ನು ಬದಲಾಯಿಸಲು ಬಂದವರನ್ನು ಬಿಡಬೇಡಿ ಎಂದು ಪ್ರಕಾಶ ರಾಜ್ ಹೇಳಿದರು.