panchamasali 
ಕಲಬುರಗಿ

ಪಂಚಾಮಸಾಲಿಗಳಿಗೆ ಸಚಿವ ಸ್ಥಾನ ನೀಡಿ

ಪ್ರಮುಖ ಮುಖ್ಯಾಂಶಗಳು

  • ಶರಣು ಪಪ್ಪಾ ಆಗ್ರಹ
  • ಹೆಚ್ಚು ಜನಸಂಖ್ಯೆಯ ಸಮುದಾಯಕ್ಕೆ ಮನ್ನಣೆಗೆ ಮನವಿ
ಕಲಬುರಗಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ದೀಕ್ಷ ಪಂಚಮಸಾಲಿ ಸಮುದಾಯದ ಮೂವರು ಹಿರಿಯ ನಾಯಕರು ಶಾಸಕರಾಗಿದ್ದು, ಅವರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಬೇಕು ಎಂದು ಅಖಿಲ ಭಾರತ ದೀಕ್ಷ ಪಂಚಾಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಶರಣು ಪಪ್ಪಾ ಆಗ್ರಹಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ದೀಕ್ಷ ಪಂಚಮಸಾಲಿ ಸಮುದಾಯವೂ ಭಾರಿ ಪ್ರಮಾಣದಲ್ಲಿ ಕಾಂಗ್ರೆಸ್​ ಬೆಂಬಲಿದೆ. ಆದರೆ, ಸಿದ್ದರಾಮಯ್ಯ ಅವರ ಸಂಪುಟದಲ್ಲಿಯೂ ದೀಕ್ಷ ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಿರಲಿಲ್ಲ. ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂಪುಟಲ್ಲಿ ಜಿಲ್ಲೆಯ ಹಿರಿಯ ಶಾಸಕರಾಗಿರುವ ಎಂ.ವೈ.ಪಾಟೀಲ್​, ಬಿ.ಆರ್​.ಪಾಟೀಲ್​ ಹಾಗೂ ಅಲ್ಲಮಪ್ರಭು ಪಾಟೀಲ್​ ಅವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮುಖಂಡ ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್​ ಧಂಗಾಪುರ ಮಾತನಾಡಿ, ದೊಡ್ಡ ಸಮುದಾಯವಾದ ವೀರಶೈವ ಲಿಂಗಾಯತಗೆ ಹೆಚ್ಚಿನ ಆದ್ಯತೆ ಕಾಂಗ್ರೆಸ್​ ಸರ್ಕಾರದಲ್ಲಿ ನೀಡಬೇಕು. ಸಿದ್ದರಾಮಯ್ಯ ಸಂಪುಟದಲ್ಲಿ 6 ಲಿಂಗಾಯತರು ಮಂತ್ರಿಗಳಾಗಿದ್ದರು. ಪ್ರಸಕ್ತ ಬಾರಿಯಾದರೂ ಸಂಖ್ಯೆ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಮೂವರು ಹಿರಿಯ ಶಾಸಕರಿದ್ದು, ಅವರಿಗೆ ಅವಕಾಶ ನೀಡಬೇಕು ಎಂದರು.
ಜಿಲ್ಲೆಯಿಂದ ವೈಜಿನಾಥ ಪಾಟೀಲ್​ ಅವರು ಸಮುದಾಯದಿಂದ ಮಂತ್ರಿಯಾದ ನಂತರ ಮತ್ತೊಬ್ಬರ ಮಂತ್ರಿಯಾಗಿಲ್ಲ. ಕೂಡಲೇ ದೀಕ್ಷ ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸಬೇಕು ಎಂದು ಹೇಳಿದರು. ಪಂಚಮಸಾಲಿ ಸಮುದಾಯದ ಪಂಚ ಸೇನೆ ಜಿಲ್ಲಾಧ್ಯಕ್ಷ ಸೋಮಶೇಖರ ಬಿ.ಮೂಲಗೆ ಇದ್ದರು.
ದೀಕ್ಷ ಪಂಚಾಮಸಾಲಿಗಳಿಗೆ 2ಎ ಮೀಸಲಿಗಾಗಿ ಹೋರಾಟ ನಡೆಯುತ್ತಿದ್ದು, ಸರ್ಕಾರ ಸ್ಪಂದಿಸುತ್ತಿಲ್ಲ, ಸ್ಪಷ್ಟ ನಿರ್ಧಾರಕ್ಕೆ ಬರುತ್ತಿಲ್ಲ. 2ಎ ಮೀಸಲಿಗಾಗಿ ಹೋರಾಟ ಹಮ್ಮಿಕೊಳ್ಳಲಿದ್ದು, ಪ್ರಸ್ತುತ ಸರ್ಕಾರದ ಹೊಸ ಸಂಪುಟದಲ್ಲಿ ದೀಕ್ಷ ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ನೀಡಿ, ಸಚಿವ ಸ್ಥಾನ ಕೊಡಬೇಕು.
> ಶರಣು ಪಪ್ಪಾ, ಜಿಲ್ಲಾಧ್ಯಕ್ಷ, ಅಖಿಲ ಭಾರತ ದೀಕ್ಷ ಪಂಚಾಮಸಾಲಿ ಸಮಾಜ
ಕಲಬುರಗಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರಲ್ಲಿ ಪಂಚಮಸಾಲಿ ಸಮಾಜ ದೊಡ್ಡದ್ದಾಗಿದ್ದು, ಮೂವರು ಶಾಸಕರಿದ್ದರೂ ಒಬ್ಬರಿಗೂ ಸ್ಥಾನ, ಮಾನ ದೊರೆಯದಿರುವುದು ಖೇದಕರ. ಕಾಂಗ್ರೆಸ್​ಗೆ ಸಮಾಜದ ಕೊಡುಗೆ ಅಪಾರ ಇದೆ. ಎಸ್​ಕೆ ಕಾಂತಾ, ವೈಜನಾಥ ಪಾಟೀಲ್​ ನಂತರ ಸಮಾಜಕ್ಕೆ ಯಾರೂ ಪ್ರಾತಿನಿಧ್ಯ ನೀಡಿಲ್ಲ. ಈಗಲಾದರೂ ಸ್ಪಂದಿಸಿ, ಸಚಿವ ಸ್ಥಾನ ನೀಡಬೇಕು.
> ಸೋಮಶೇಖರ ಮೂಲಗೆ,
ಜಿಲ್ಲಾಧ್ಯಕ್ಷ ಪಂಚ ಸೇನೆ ಕಲಬುರಗಿ