ಕಲಬುರಗಿ ನವಲದಿ ಲೇಔಟ್​ನಲ್ಲಿ ಸಾರ್ವಜನಿಕರು ಮನೆ ಕಸ ರಸ್ತೆ ಬದಿ ಎಲ್ಲೆಂದರಲ್ಲಿ ಚೆಲ್ಲಿ ಹೋಗಿರುವ ದೃಶ್ಯ. 
ಕಲಬುರಗಿ

ಆರೋಗ್ಯಕ್ಕೆ ಆತಂಕವೊಡ್ಡಿದ ಕಸ

ಕಲಬುರಗಿ: ನಗರದ ನವಲದಿ ಲೇಔಟ್​ ಹಾಗೂ ಶರಣರಾಜ್​ ಸಿಟಿ ಪ್ರದೇಶ ಸಾರ್ವಜನಿಕ ಸ್ಥಳ ಹಾಗೂ ರಸ್ತೆ ಪಕ್ಕದಲ್ಲಿ ಕಸ ಸುರಿಯುತ್ತಿರುವ ಕಾರಣ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆಲವರು ನಿಯಮ ಮೀರಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುತ್ತಿದ್ದರೆ, ಕೆಲ ಆಸ್ಪತ್ರೆ ಸಿಬ್ಬಂದಿ ಅವಧಿ ಮೀರಿದ ಔಷಧ ತಂದು ಬಿಸಾಡುತ್ತಿದ್ದರಿಂದ ವಾತಾವರಣ ಕಲುಷಿತವಾಗುತ್ತಿದೆ.

ಕಸದ ರಾಶಿಗಳಿಂದ ದುರ್ವಾಸನೆ, ಸೊಳ್ಳೆ ಮತ್ತು ನೊಣದ ಕಾಟ ಹೆಚ್ಚಾಗಿದ್ದು, ಕಾಲನಿ ನಿವಾಸಿಗಳಲ್ಲಿ ಆರೋಗ್ಯ ಸಮಸ್ಯೆ ಆತಂಕ ಎದುರಾಗಿದೆ. ಅಲರ್ಜಿ, ಅಸ್ತಮಾ, ಉಸಿರಾಟ ತೊಂದರೆ ಹಾಗೂ ಸೋಂಕುಗಳಂತಹ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳು ತಣ ಇತ್ತ ಗಮನಹರಿಸುವ ಅಗತ್ಯವಿದೆ.

ನಿತ್ಯ ಬೆಳಗ್ಗೆ ಆರೋಗ್ಯ ಸುಧಾರಿಸಿಕೊಳ್ಳಲು ಅನೇಕ ವೃದ್ಧರು ವಾಕಿಂಗ್​ ಮತ್ತು ಯೋಗಾಭ್ಯಾಸಕ್ಕಾಗಿ ಈ ಪ್ರದೇಶಗಳಿಗೆ ಬರುತ್ತಾರೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ, ದುರ್ವಾಸನೆ ಮತ್ತು ಸೊಳ್ಳೆ ಹೆಚ್ಚಳದಿಂದ ಆರೋಗ್ಯಕರ ಬದಲು ಅನಾರೋಗ್ಯಕ್ಕೆ ಈಡಾಗುವ ಸ್ಥಿತಿ ನಿರ್ಮಾಣವಾಗಿದೆ.

ಪಾಲಿಕೆ ಅಧಿಕಾರಿಗಳು ನವಲದಿ ಲೇಔಟ್​ ಹಾಗೂ ಶರಣರಾಜ್​ ಸಿಟಿ ಪ್ರದೇಶಗಳಿಗೆ ಭೇಟಿ ನೀಡಿ ಕಸದ ರಾಶಿ ತೆರವುಗೊಳಿಸಬೇಕು. ನಿಯಮಿತ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರ ಜತೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಔಷಧ ಸಿಂಪಡಣೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಕಸ ಸುರಿಯುವವರ ವಿರುದ್ಧ ನಿಯಮಾನುಸಾರ ದಂಡ ವಿಧಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಸ್ವಚ್ಛ ಪರಿಸರವೇ ಆರೋಗ್ಯದ ಮೂಲ. ಮಕ್ಕಳು ಮತ್ತು ವೃದ್ಧರ ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಸ್ವಚ್ಛತೆಯ ಜವಾಬ್ದಾರಿ ವಹಿಸಬೇಕು. ಮನೆ ಸ್ವಚ್ಛತೆಗೆ ನೀಡುವ ಕಾಳಜಿ ಸಾರ್ವಜನಿಕ ಸ್ಥಳಗಳಲ್ಲೂ ಇರಬೇಕು.
> ಶಿವಲಿಂಗಯ್ಯ ಮಠ ಯೋಗ ಗುರು, ಕಲಬುರಗಿ