ಕಲಬುರಗಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಚಾಲನೆ ನೀಡಿದರು. ಡಿಸಿ ಬಿ.ಫೌಜಿಯಾ ತರನ್ನುಮ್​, ಭಂವರ್​ಸಿಂಗ್​ ಮೀನಾ, ಡಾ.ಶರಣಪ್ಪ ಎಸ್​.ಡಿ, ಅವಿನಾಶ ಶಿಂಧೆ, ಅಡ್ಡೂರು ಶ್ರೀನಿವಾಸಲು, ರಾಜಕುಮಾರ ರಾಥೋಡ್​ ಇತರರಿದ್ದರು. 
ಕಲಬುರಗಿ

ದೂರು ನಿವಾರಣಾ ಸಮಿತಿ ರಚನೆ ಕಡ್ಡಾಯ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿಕೆ
  • ಲೈಂಗಿಕ ಕಿರುಕುಳ ನಿಯಂತ್ರಣ ಅಧಿಕಾರಿಗಳಿಗೆ ತರಬೇತಿ
ಕಲಬುರಗಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ನಿಷೇಧಿಸುವಿಕೆ, ನಿವಾರಣೆ 2013ರ ಕಾಯ್ದೆ ಅನ್ವಯ 10 ಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸ ಮಾಡುವ ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳಿಗೆ ಆಂತರಿಕ ದೂರು ನಿವಾರಣಾ ಸಮಿತಿ ರಚನೆ ಕಡ್ಡಾಯವಾಗಿದೆ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶ್ರೀನಿವಾಸ ನಿವಾಸ ನವಲೆ ಹೇಳಿದರು.
ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್​ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಟಕದ ಸಹಯೋಗದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧಿಸುವಿಕೆ ನಿವಾರಿಸುವಿಕೆ&2013ರ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಸಂರಕ್ಷಣಾಧಿಕಾರಿ ಮತ್ತು ಭಾಗೀದಾರ ಇಲಾಖೆಗಳ ಅಧಿಕಾರಿಗಳಿಗೆ ಎರಡು ದಿನದ ಓರಿಯೆಂಟೇಷನ್​ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧಿಕಾರಿಗಳು ಜಾಗೃತಿವಹಿಸಿ

ಮಹಿಳೆಯರಲ್ಲಿ ಕಾನೂನು ಅರಿವು ಕುರಿತು ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಚಿಂತಾಜನಕವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ನಮಗೆ ಸಮಾನತೆ ಹಕ್ಕು ನೀಡಿದೆ. ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸಲು ಕಂಬಕಬದ್ಧರಾಗಬೇಕಿದೆ. ಪೋಲಿಸ್​ ಇಲಾಖೆ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಮಾತನಾಡಿ, ಸಾಕಷ್ಟು ಕಾನೂನುಗಳಿವೆ, ಪ್ರಚಾರ ಕಾರ್ಯ ಸಾಕಷ್ಟಾಗಿದೆ. ಆದರೂ ಕಾನೂನು ಉಲ್ಲಂನೆಯಾಗುತ್ತಿದೆ. ಸಮಾಜಕ್ಕೆ ಇದೊಂದು ಸವಾಲಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ&2005 ಅಡಿ ಸಲ್ಲಿಸಲಾದ ಅರ್ಜಿ ನಿಗದಿತ ಸಮಯದೊಳಗೆ ವಿಲೇವಾರಿ ಮಾಡಲು ಸಂಬಂಧಿಸಿದ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು. ಸೆಕ್ಷನ್​ 12 ಮತ್ತು ಸೆಕ್ಷನ್​ 18 , 19 ಅಥವಾ 20ರ ಅಡಿ ಬಾಧಿತ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳನ್ನು 60 ದಿನಗಳೊಳಗೆ ನ್ಯಾಯಾಧೀಶರು ನಿರ್ಧರಿಸುತ್ತಾರೆ ಎಂದರು.

ಮುಲಾಜಿಲ್ಲದೆ ದೂರು ನೀಡಿ

ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ ಯಾವುದೇ ಮುಲಾಜಿಲ್ಲದೆ ದೂರು ನೀಡಿ. ಜಿಲ್ಲೆಯ ಯಾವುದೇ ಸ್ಥಳದಲ್ಲಿ ತೊಂದರೆಗೆ ಒಳಗಾದರೆ 112 ಗೆ ಕರೆ ಮಾಡಿ 10 ನಿಮಿಷದಲ್ಲಿ ನಿಮ್ಮ ಸ್ಥಳಕ್ಕೆ ಧಾವಿಸಲಾಗುವುದು. ಮಹಿಳೆಯರು ಲೈಂಗಿಕ ಕಿರುಕುಳ ಮೌನವಾಗಿ ಸಹಿಸುವ ಅಗತ್ಯವಿಲ್ಲ. ಆನ್​ಲೈನ್​ ಪೋರ್ಟಲ್​ ಮೂಲಕ ದೂರು ದಾಖಲಿಸಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್​ಸಿಂಗ್​ ಮೀನಾ ಮಾತನಾಡಿದರು. ಕರಪತ್ರ ಬಿಡುಗಡೆ ಮಾಡಿದರು. ಹಿರಿಯ ನ್ಯಾಯವಾದಿ, ಸಂಪನ್ಮೂಲ ವ್ಯಕ್ತಿ ವಿನೋದ್​ಕುಮಾರ್​ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವ ಕಾಯ್ದೆ ಅನುಷ್ಠಾನ ಕುರಿತು ಪಿ.ಪಿ.ಟಿ. ಮೂಲಕ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಥೋಡ್​ ಸ್ವಾಗತಿಸಿದರು. ತಾಲೂಕಾ ಶಿಶುಅಭಿವೃದ್ಧಿ ಯೋಜನಾಧಿಕಾರಿ ಶಿವಲೀಲಾ ಡೆಂಗಿ ನಿರೂಪಿಸಿದರು. ಸಹಾಯಕ ನಿರ್ದೇಶಕ ಶಿವಶರಣಪ್ಪ ವಂದಿಸಿದರು.
"

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆಗದಂತೆ ನೋಡಿಕೊಳ್ಳುವುದರ ಜತೆಗೆ ಕಚೇರಿಗಳಲ್ಲಿ ಮಹಿಳಾ ವಿಶ್ರಾಂತಿ ಕೋಣೆ ಸ್ಥಾಪನೆ ಮಾಡಿ ಸುರಕ್ಷತೆ ನೀಡುವುದು ನಮ್ಮ ಕೆಲಸ. ಮಹಿಳೆಯರೂ ಅಭಿವೃದ್ಧಿ ಹೊಂದುವ ಸಲುವಾಗಿ ಜಿಲ್ಲಾ, ತಾಲೂಕು, ಗ್ರಾಮಮಟ್ಟದಲ್ಲಿ ಕೂಸಿನ ಮನೆ ಮಾಡಲಾಗಿದೆ.

ಭಂವರ್​ಸಿಂಗ್​ ಮೀನಾ,ಸಿಇಒ, ಜಿಪಂ ಕಲಬುರಗಿ.