ಕಲಬುರಗಿ: ರಾಜ್ಯ ಸರ್ಕಾರ ಆರಂಭಿಸಿರುವ ಎಲಿವೇಟ್ ಕರ್ನಾಟಕ ಕಾರ್ಯಕ್ರಮ ಉದ್ಯಮ ಕ್ಷೇತ್ರದಲ್ಲಿ ದೇಶದಲ್ಲೇ ದೊಡ್ಡ ಬದಲಾವಣೆ ತರಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಂಬೂ ಬಜಾರ್ ಪ್ರದೇಶದ ಖಾಸಗಿ ಹೋಟೆಲ್ನಲ್ಲಿ ಐಟಿ-ಬಿಟಿ ಇಲಾಖೆ ಮತ್ತು ಕೃಷಿ ಕಲ್ಪ ಸಂಸ್ಥೆ ಸಹಯೋಗದಡಿ ಕೃಷಿ ನವೋದ್ಯಮಿಗಳಿಗಾಗಿ ಶನಿವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಸ್ಟಾರ್ಟಪ್ ಡೈಲಾಗ್ ಸಂವಾದದಲ್ಲಿ ಮಾತನಾಡಿದ ಅವರು, ನವೋದ್ಯಮಿಗಳಿಗೆ ಉತ್ತೇಜಿಸಲು ಮತ್ತು ಆರ್ಥಿಕ ಪ್ರಗತಿಗಾಗಿ ಈ ಯೋಜನೆ ಆರಂಭಿಸಲಾಗಿದೆ. ಬೇಡಿಕೆಯಂತೆ ಅಗತ್ಯವಿರುವ ನೀತಿ ಮತ್ತು ಯೋಜನೆಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ. ತಮಗೆ ಯಾವ ತೆರನಾದ ನೀತಿಗಳು ಬೇಕು ಎಂಬುದನ್ನು ನವೋದ್ಯಮಿಗಳು ತಿಳಿಸಿದರೆ ಅದರಂತೆ ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕದಲ್ಲಿ ಈಗ 300ಕ್ಕೂ ಹೆಚ್ಚು ನವೋದ್ಯಮಿಗಳಿದ್ದು, ಮುಂದಿನ ವರ್ಷದೊಳಗೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಈ ಭಾಗಕ್ಕೆ ಪ್ರತ್ಯೇಕವಾಗಿ ಇನ್ನೂ 150 ನವೋದ್ಯಮಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಯುವ ಸಮೂಹಕ್ಕೆ ಉತ್ತೇಜನ ನೀಡಲು 1500 ನವೋದ್ಯಮಗಳಿಗೆ ಎಲಿವೇಟ್ ಕಾರ್ಯಕ್ರಮದಡಿ ಗರಿಷ್ಠ 50 ಲವರೆಗೆ ಸಹಾಯಧನ ನೀಡಲಾಗುತ್ತಿದೆ. ಪ್ರಪಂಚದ ಯಾವ ರಾಜ್ಯದಲ್ಲೂ ಇಂಥ ಯೋಜನೆ ಜಾರಿಯಲ್ಲಿಲ್ಲ. ಇದು ಕರ್ನಾಟಕದಲ್ಲಿ ಮಾತ್ರ. ಇದರಲ್ಲಿ ಬೆಂಗಳೂರಿನಿಂದಾಚೆ ಇರುವ ನವೋದ್ಯಮಿಗಳು ಶೇ.28 ಮಾತ್ರ. ಕಕದಲ್ಲಿ ನವೋದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಇದಕ್ಕಾಗಿ ಬಿಯಾಂಡ್ ಬೆಂಗಳೂರು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಮುಂದಿನ 10 ವರ್ಷ ಡೀಪ್ ಟೆಕ್ ಕ್ಷೇತ್ರದಲ್ಲಿ ನವೋದ್ಯಮ ಸ್ಥಾಪನೆಗೆ ಒಂದು ಕೋಟಿವರೆಗೂ ಸಹಾಯಧನವನ್ನು ಆಯ್ದ ನವೋದ್ಯಮಿಗಳಿಗೆ ನೀಡುವ ಯೋಜನೆ ರೂಪಿಸಲಾಗಿದೆ. ನವೋದ್ಯಮಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ದ್ವೀತಿಯ ಮತ್ತು ತೃತೀಯ ದರ್ಜೆ ನಗರಗಳಿಗೂ ವಿಸ್ತರಿಸಬೇಕು ಎಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಸ್ಥಳಿಯ ಆರ್ಥಿಕತೆ ಬಲಪಡಿಸಲು ಮತ್ತು ಯುವಕರನ್ನು ಉದ್ಯೋಗದಾತರನ್ನಾಗಿ ಪರಿವರ್ತಿಸಲು ಜಾರಿಗೆ ತಂದಿರುವ ಮಹತ್ವಾಕಾಂ ಲೀಪ್ (ಲೋಕಲ್ ಎಕನೊಮಿಕ್ ಅಕ್ಸಲೇಟರ್ ಪ್ರೋಗ್ರಾಮ್) ಯೋಜನೆ ಜಾರಿಗೆ ತರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಖರ್ಗೆ ಉತ್ತರಿಸಿದರು.
ನವೋದ್ಯಮ ಸ್ಥಾಪನೆ ಸಂದರ್ಭದಲ್ಲಿ ವೈಫಲ್ಯದಿಂದ ಕುಗ್ಗದೆ ಮುಂದೆ ಸಾಗಿ. ಸ್ಥಳಿಯ ಗುರುತಿನೊಂದಿಗೆ ಲೋಕಲ್-ವೋಕಲ್ ಕಲ್ಪನೆಯಲ್ಲಿ ಹೊಸ ಐಡಿಯಾದೊಂದಿಗೆ ಉದ್ಯಮ ಸ್ಥಾಪಿಸಿ ಸ್ಥಿರವಾದ ವಿತರಣೆ ಹೊಂದಿದರೆ ಉದ್ಯಮದಲ್ಲಿ ಯಶಸ್ಸು ಸಾಧ್ಯ ಎಂದರು.
ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಇಲ್ಲಿನ ರೈತರಿಗೆ ಅನುಭವ ಇದೆ. ಅದರೆ ಕೃಷಿ ಉತ್ಪನ್ನದ ಮಾರುಕಟ್ಟೆ ವಿಸ್ತರಣೆಯ ಕೌಶಲ ಇಲ್ಲ. ಈ ಕೊರತೆ ತುಂಬಿಸುವ ಕೆಲಸವಾಗಬೇಕಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ಸೇವೆ ನೀಡುವುದು ಮಹತ್ವದ್ದಾಗಿದೆ ಎಂದರು.
ದೂರದ ಗುಡ್ಡ ನುಣ್ಣಗೆ ಎಂಬಂತೆ ಹೊಸ ಯೋಜನೆ ಆರಂಭಿಸುವಾಗ ಸಮಸ್ಯೆ ಸಹಜ. ಮುಳ್ಳಿನ ಹಾದಿಯಲ್ಲಿ ನಡೆದು ಸಾಧನೆ ಮಾಡಬೇಕು. ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡಕೊಳ್ಳುವ ಮೂಲಕ ಸುಸ್ಥಿರ ಪ್ರಗತಿಗೆ ಮುಂದಾಗಬೇಕು. ದೊಡ್ಡ ಕಂಪನಿಗಳ ಜತೆ ಸ್ಥಳಿಯ ಸಣ್ಣ ಕಂಪನಿಗಳನ್ನು ಜೋಡಿಸುವ ಕಾರ್ಯವನ್ನು ಸೇತುವೆಯಂತೆ ಜಿಲ್ಲಾಡಳಿತ ಮಾಡುತ್ತದೆ ಎಂದು ತಿಳಿಸಿದರು.
ಕೃಷಿಕಲ್ಪ ಎಸ್ಸೆಲ್ ಅಧ್ಯಕ್ಷ ಡಾ.ಪ್ರಶಾಂತ ಪ್ರಕಾಶ, ಸತ್ವ ಕನ್ಸಲ್ಟಿಂಗ್ ಸಿಇಒ ಶ್ರೀಕೃಷ್ಣ ಶ್ರೀಧರ ಸಂವಾದದಲ್ಲಿ ಭಾಗಿಯಾಗಿದ್ದರು. ಕೃಷಿ ಕಲ್ಪ ಸಿಇಒ ಸಿ.ಎಂ. ಪಾಟೀಲ್ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.
ಶಾಸಕರಾದ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್ ಹರವಾಳ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯ ಸೈಯದ್ ಮಹೆಮೂದ್ ಚಿಸ್ತಿ ಸಾಹೇಬ್, ಮೇಯರ್ ಅಜ್ಮಲ್ ಗೋಲಾ, ಐಜಿಪಿ ಶಾಂತನು ಸಿನ್ಹಾ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಶಾಲೂ, ಜಿಪಂ ಸಿಇಒ ರಾಹುಲ್ ಸಂಕನೂರ, ಪಾಲಿಕೆ ಆಯುಕ್ತ ಪಿ. ಶ್ರವಣಕುಮಾರ ಇದ್ದರು. ಯು.ಕೆ ಕಂಪನಿ ಸಂಸ್ಥಾಪಕ ಡಾ.ಕೆ. ಉಲ್ಲಾಸ್ ಕಾಮತ್ ಅವರು ದೇಶದ ಅರ್ಥಿಕತೆ ಕುರಿತು ವಿವರಣೆ ನೀಡಿದರು.
ಬಹುತೇಕ ಉದ್ಯಮಿಗಳು ಸರ್ಕಾರ ನಮಗೇನೂ ಮಾಡಲ್ಲ. ಯಾವುದೇ ಸಬ್ಸಿಡಿ ಸಿಗಲ್ಲ ಎನ್ನುವ ಭ್ರಮೆಯಿಂದ ಹೊರಬರಬೇಕು. ಇದು ನಿಮ್ಮ ಸರ್ಕಾರ, ನಿಮ್ಮ ಎಲ್ಲ ಉದ್ಯಮಗಳಿಗೆ ಅಗತ್ಯ ಸಹಕಾರ ನೀಡಲು ಬದ್ದವಾಗಿದೆ. ಜಿಡಿಪಿಗೆ ಬೆಂಗಳೂರು ಕೊಡುಗೆ ಶೇ.41ರಷ್ಟಿದೆ. ಕಲಬುರಗಿ ಪಾಲು ಶೇ.1.9 ಇದ್ದು, ಶೇ.3ಕ್ಕೆ ಏರಿಸಿದರೆ ಪ್ರಗತಿಯ ಕ್ರಾಂತಿ ಆಗಲಿದೆ.> ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ