ಕಲಬುರಗಿ: ಜಿಲ್ಲೆಯ ಕಬ್ಬು ರೈತರಿಂದ ಖರೀದಿಗೂ ಮುನ್ನ ಟನ್ಗೆ ದರ, ಸಾಗಣೆ ವೆಚ್ಚದ ಕುರಿತು ಸೂಕ್ತ ನಿರ್ಧಾರಕ್ಕೆ ಬಂದ ಬಳಿಕವೇ ಕಟಾವು ಪ್ರಕ್ರಿಯೆ ಆಂಭಿಸುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ ನಡೆಸಿದ ಅವರು, ಕಬ್ಬು ಕಟಾವಿಗೆ ಬಂದಿದೆ. ಜಿಲ್ಲೆಯ ಐದು ಕಾರ್ಖಾನೆಗಳು ಪರಸ್ಪರ ಸಮಾಲೋಚನೆ ನಡೆಸಿ ರೈತರಿಗೆ ನ್ಯಾಯಯುತ ದರ ನೀಡಲು ಒಮ್ಮತದ ನಿರ್ಧಾರ ಕೈಗೊಳ್ಳಬೇಕು ಎಂದರು.
ಕಬ್ಬು ಕಟಾವಿನಲ್ಲಿ ತಾರತಮ್ಯ, ಪ್ರತಿ ಕಂಪನಿ ಪ್ರತ್ಯೇಕ ದರ, ತೂಕದಲ್ಲಿ ಮೋಸ, ತಡವಾಗಿ ಪಾವತಿ, ಹಳೇ ಪಾವತಿ ಬಾಕಿ ಕುರಿತ ಕಾರ್ಖಾನೆಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ರೈತರಿಗೆ ಕಾಲಮಿತಿಯಲ್ಲಿ ಹಣ ಪಾವತಿಸಬೇಕು. ಕಬ್ಬು ಕಟಾವು, ತೂಕ, ಹಣ ಪಾವತಿ ಹೀಗೆ ಪ್ರತಿ ಹಂತದಲ್ಲಿ ರೈತರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಕಬ್ಬು ತೂಕಕ್ಕೆ ಸಂಬಂಧಿಸಿದಂತೆ ಕಾನೂನು ಮಾಪನಶಾಸ ಇಲಾಖೆ ಅಧಿಕಾರಿಗಳು ಆಗಾಗ್ಗೆ ಸಕ್ಕರೆ ಕಾರ್ಖಾನೆಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ರೈತ ಮುಖಂಡ ಈರಣ್ಣ ಭಜಂತ್ರಿ ಮಾತನಾಡಿ, ಕೆಲವೊಮ್ಮೆ ರೈತ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕೊಂಡೊಯ್ದಾಗ ರಾತ್ರಿ ಅಲ್ಲೇ ಕಳೆಯಬೇಕಾಗುತ್ತದೆ. ಉಗಾರ್- ಶುಗರ್ ಕಾರ್ಖಾನೆಯಲ್ಲಿ ರಾತ್ರಿ ಕಳೆಯಲು ಸೂಕ್ತ ಶೆಡ್, ಕುಡಿಯುವ ನೀರು, ಶೌಚಗೃಹ ಸೇರಿ ಮೂಲಸೌಲಭ್ಯ ವ್ಯವಸ್ಥೆ ಇಲ್ಲ ಎಂದು ಸಭೆ ಗಮನಕ್ಕೆ ತಂದರು. ಸ್ಪಂದಿಸಿದ ಡಿಸಿ ಅವರು, ಎಲ್ಲ ಕಾರ್ಖಾನೆಗಳು ರೈತರಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಸೂಚನೆ ನೀಡಿದರು.
ರೈತ ಮುಖಂಡ ರಮೇಶ ಪಾಟೀಲ್ ಮಾತನಾಡಿ, ರೇಣುಕಾ ಶುಗರ್ಸ್ನಿಂದ ಹೊರಸೂಸುವ ಬೂದಿಯಿಂದ ಕಾರ್ಖಾನೆ ಸುತ್ತಲಿನ ಬೆಳೆಗಳು ಹಾನಿಗೀಡಾಗಿದ್ದು, ರೈತರು ಕಂಗೆಟ್ಟಿದ್ದಾರೆ. ಕಾರ್ಖಾನೆಯಿಂದ ಪರಿಹಾರ ಕೊಡಿಸಬೇಕು ಎಂದು ಕೋರಿದರು. ತೀವ್ರ ಗರಂ ಆದ ಡಿಸಿ ಅವರು, ಕಾರ್ಖಾನೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಪರಿಸರ ಅಧಿಕಾರಿ ವೆಂಕಟೇಶ ಅವರಿಗೆ ನಿರ್ದೇಶನ ನೀಡಿದರು.
ರೈತ ಸಂಘದ ರಮೇಶ ಹೂಗಾರ, ಶರಣಬಸಪ್ಪ ಮಮಶೆಟ್ಟಿ, ಧರ್ಮರಾಜ ಸಾಹು, ಶ್ರೀಮಂತ ಬಿರಾದಾರ ಮಾತನಾಡಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಾರುತಿ ಬ್ಯಾಕೋಡ್ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಆಯುಕ್ತೆ ರಿತಿಕಾ ವರ್ಮಾ, ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಹಸೀಲ್ದಾರರಾದ ಸುಬ್ಬಣ್ಣ ಜಮಖಂಡಿ, ಸಂಜೀವಕುಮಾರ ದಾಸರ್, ಯಲ್ಲಪ್ಪ ಸುಬೇದಾರ, ಅಣ್ಣಾರಾವ ಪಾಟೀಲ್ ಇತರರಿದ್ದರು.
ಬರದಿಂದ ಈ ವರ್ಷ 5,500 ರೂ. ಎಫ್ಆರ್ಪಿ ನಿಗದಿಪಡಿಸಬೇಕು. ಬಾಕಿ ಹಣ ತಕ್ಷಣ ಪಾವತಿಸಬೇಕು. ಕಬ್ಬು ಕಟಾವಿನಲ್ಲಿ ತಾರತಮ್ಯ ಮಾಡಬಾರದು. ಟೋಲ್ ಗೇಟ್ ಪಾವತಿಯಿಂದ ವಿನಾಯಿತಿ ನೀಡಬೇಕು. ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆ ಗೇಟ್ ಬಳಿ ತೂಕ ಮಾಡಿ ಕಬ್ಬು ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ 500 ರೂ. ಹೆಚ್ಚುವರಿ ಪ್ರೋತ್ಸಾಹಧನ ಘೋಷಿಸಬೇಕು. ವಿದ್ಯುತ್ ಅವಡದಿಂದ ಕಬ್ಬು ಸುಟ್ಟ ರೈತರಿಗೆ ಪರಿಹಾರ ನೀಡಬೇಕು ಇತರ ಬೇಡಿಕೆಗಳನ್ನು ರೈತರು ಸಭೆಯ ಮುಂದಿಟ್ಟರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಭೀಕರ ಬರದಿಂದ ರೈತರು ತತ್ತರಿಸಿದ್ದು, ಸಕ್ಕರೆ ಕಾರ್ಖಾನೆಗಳು ಉದಾರ ಮನಸ್ಸಿನಿಂದ ಟನ್ ಕಬ್ಬಿಗೆ ನ್ಯಾಯಯುತ ದರ ನಿಗದಿ ಮಾಡಬೇಕು. ಎಥೆನಾಲ್, ಸಕ್ಕರೆ ಬೆಲೆ ಹೆಚ್ಚಾಗಿದೆ. ದಿನೇದಿನೆ ಬೆಲೆ ಏರಿಕೆಯಿಂದ ಕಾರ್ಖಾನೆಗಳಿಗೆ ಲಾಭವಿದೆ. ಹೀಗಾಗಿ ಲಾಭದ ಅಂಶ ರೈತರಿಗೂ ಹಂಚಬೇಕು.> ಇಕ್ರಮ್ ಶರೀಫ್ ಜಿಲ್ಲಾಧಿಕಾರಿ