- ಶಿಕ್ಷಣ ಸಂಸ್ಥೆಗಳ ಸುತ್ತ ಸಂಚಾರ ಪಾಲನೆ ವಿಶೇಷ ಕಾರ್ಯಾಚರಣೆ 13ರಿಂದ
ಕಲಬುರಗಿ: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಕಳೆದ 10 ದಿನದಲ್ಲಿ ನಗರದ ವಿವಿಧೆಡೆ 4,078 ಜನರ ವಿರುದ್ಧ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 22.19 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಸಾರ್ವಜನಿಕರು ಸಂಚಾರ ನಿಯಮ ಪಾಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ.
ಜು.13ರಿಂದ ನಗರದ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸುತ್ತಿದ್ದು, ವಿದ್ಯಾರ್ಥಿಗಳು, ಶಿಕ್ಷಕ ಸಮುದಾಯದವರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
10 ದಿನದಲ್ಲಿ ಭರ್ಜರಿ ದಂಡ: ನಗರದಲ್ಲಿ ಜು.1ರಿಂದ 10ರವರೆಗೆ 10 ದಿನ ವಿಶೇಷ ಕಾರ್ಯಾಚರಣೆ ನಡೆಸಿದ್ದು, 4 ಸಾವಿರ ಜನರಿಗೆ 22.19 ಲಕ್ಷ ದಂಡ ವಿಧಿಸಲಾಗಿದೆ.
ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ 3932 ಜನರಿಗೆ 19.66 ಲಕ್ಷ ರೂ. ದಂಡ, ಹಿಂಬದಿ ವಾಹನ ಸವಾರರು ಹೆಲ್ಮೆಟ್ ಧರಿಸದ್ದಕ್ಕೆ 34 ಜನರಿಗೆ 17 ಸಾವಿರ ರೂ. ದಂಡ, ಕುಡಿದು ವಾಹನ ಚಲಾಯಿಸಿದ 23 ಜನರಿಗೆ 1.90 ಲಕ್ಷ ರೂ. ದಂಡ, ಸೀಟ್ ಬೆಲ್ಟ್ ಧರಿಸದ 36 ಜನರಿಗೆ 18 ಸಾವಿರ ರೂ. ದಂಡ, ತ್ರಿಬಲ್ ರೈಡ್ ಮಾಡಿದ 32 ಜನರಿಗೆ 16 ಸಾವಿರ ರೂ. ಸೇರಿ ನಂಬರ್ ಪ್ಲೇಟ್ ಬದಲಾಯಿಸಿದ, ನೋ ಪಾರ್ಕಿಂಗ್ ಮಾಡಿದ, ಅತಿವೇಗದ ಚಾಲನೆ ಮಾಡಿದವರಿಗೆ, ಅನ್ಯ ಸಂಚಾರ ಮಾಡಿದ ಉಲ್ಲಂನೆಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಿದ್ದು, ಸಾರ್ವಜನಿಕರು ನಿಯಮ ಪಾಲಿಸಿ, ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.