roof collaps 
ಕಲಬುರಗಿ

ಚಾವಣಿ ಕುಸಿದು ವಿದ್ಯಾರ್ಥಿನಿಯರಿಗೆ ಗಾಯ: ಕಳಪೆ ಕಾಮಗಾರಿ ಆರೋಪ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ದುರ್ಟನೆ
  • ಕಳಪೆ ಕಾಮಗಾರಿ ಆರೋಪ
ಕಲಬುರಗಿ: ನಗರದ ಎಸ್ಪಿ ಕಚೇರಿ ಸಮೀಪದಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದ ವೇಳೆ ತರಗತಿ ಕೋಣೆಯ ಚಾವಣಿಯ ಸಿಮೆಂಟ್​ ಪದರು ಏಕಾಏಕಿ ಕುಸಿದು ಬಿದ್ದಿದ್ದರಿಂದ ಐವರು ವಿದ್ಯಾರ್ಥಿನಿಯರು ಶುಕ್ರವಾರ ಗಾಯಗೊಂಡಿದ್ದಾರೆ.
ಕಾಲೇಜಿನ ಪ್ರಥಮ ಪಿಯುಸಿ ಕಾಮರ್ಸ್​ ತರಗತಿ ನಡೆಯುತ್ತಿದ್ದ ವೇಳೆ ಅವಡ ಸಂಭವಿಸಿದ್ದು, ತರಗತಿಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಠ ಆಲಿಸುತ್ತಿದ್ದರು. ಚಾವಣಿಯ ಸಿಮೆಂಟ್​ ಹೆಪ್ಪುಗಟ್ಟಿದ ಭಾಗಗಳು ವಿದ್ಯಾರ್ಥಿನಿಯರ ಮೇಲೆ ಬಿದ್ದಿದ್ದರಿಂದ ಸ್ನೇಹಾ ಖಣದಾಳ, ಶೀತಲ್​ ಮಾಚನಾಳ ತಾಂಡಾ, ಪೂಜಾ ಶ್ರೀನಿವಾಸ ಸರಡಗಿ, ದಿವ್ಯಾ ಧರ್ಮಾಪುರ ಹಾಗೂ ಸೃಷ್ಟಿ ಸೇರಿ ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣ ಉಪನ್ಯಾಸಕರು ಜಿಮ್ಸ್​ನ ಟ್ರಾಮಾ ಕೇರ್​ ಟಕದಲ್ಲಿ ಚಿಕಿತ್ಸೆ ದಾಖಲಿಸಿದ್ದಾರೆ. ವಿದ್ಯಾರ್ಥಿನಿ ದಿವ್ಯಾ ಕೈಗೆ ಗಂಭೀರ ಗಾಯವಾಗಿದ್ದು, ಸ್ನೇಹಾ ಬೆನ್ನಿಗೆ ಪೆಟ್ಟಾಗಿದೆ. ಶೀತಲ್​ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೊರಗಿನ ಔಷಧ: ಗಾಯಾಳು ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಬೇಕಾದ ಬೆಲ್ಟ್​ ಸೇರಿ ವಿವಿಧ ಸಲಕರಣೆ ಹೊರಗಿನಿಂದ ತಂದು ಕೊಡಿ ಎಂದು ಚೀಟಿ ಬರೆದುಕೊಟ್ಟಿದ್ದು, ಬಡ ಪಾಲಕರು ಹಣವಿಲ್ಲದೇ ಕಂಗಾಲಾಗಿದ್ದಾರೆ. ಸರ್ಕಾರವೇ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಬೇಕು. ನಾವು ಕೂಲಿ ಕೆಲಸ ಬಿಟ್ಟು ಬಂದಿದ್ದೇವೆ. ಈಗ ಹಣ ಎಲ್ಲಿಂದ ಖರ್ಚು ಮಾಡಬೇಕು ಎಂದು ಅಳಲು ತೋಡಿಕೊಂಡರು.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಘಟನೆಯ ದೃಶ್ಯಗಳು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಾವಣಿ ಕುಸಿಯುತ್ತಿದ್ದಂತೆ ವಿದ್ಯಾರ್ಥಿನಿಯರು ಭಯಭೀತರಾಗಿ ಜೀವ ಉಳಿಸಿಕೊಳ್ಳಲು ತರಗತಿಯಿಂದ ಹೊರಗೆ ಚೆಲ್ಲಾಪಿಲ್ಲಿಯಾಗಿ ಓಡಿಬರುವ ದೃಶ್ಯಗಳು ಕಂಡುಬಂದಿವೆ.
ಇಡೀ ಕಟ್ಟಡ ಶಿಥಿಲ, ಜೀವ ಭಯ: ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡವೂ ನಾಲ್ಕೆದು ವರ್ಷದ ಹಿಂದೆಯೇ ಲೋಕಾರ್ಪಣೆಯಾಗಿದ್ದು, ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗಿದೆ. ನಾಲ್ಕು ಅಂತಸ್ತಿನ ಇಡೀ ಕಟ್ಟಡದ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದ್ದು, ಚಾವಣಿಯೂ ಯಾವುದೇ ಸಂದರ್ಭದಲ್ಲಿ ಬೀಳಬಹುದಾಗಿದೆ. ಶುಕ್ರವಾರ ಕಾಲೇಜಿನ ಕೋಣೆ 18ರಲ್ಲಿ ದುರಂತ ಸಂಭವಿಸಿತ್ತು. ಎರಡು ವರ್ಷದ ಹಿಂದೆ ಕೋಣೆ 17ರಲ್ಲಿ ಚಾವಣಿ ಕುಸಿದಿತ್ತು. ಅಲ್ಲಿಯೇ ಬೋಧನೆ ಮುಂದುವರಿಸಲಾಗಿತ್ತು. ಕೆಳ ಅಂತಸ್ತಿನ ಕೋಣೆ 4ರಲ್ಲಿ ಗೋಡೆಯೂ ಉಬ್ಬಿ ನಿಂತ್ತಿದ್ದು, ವಿದ್ಯಾರ್ಥಿನಿಯರನ್ನು ಗೋಡೆಯಿಂದ ದೂರ ಕೂಡಿಸಿ, ಪಾಠ ಮಾಡಿಸುತ್ತಿದ್ದೇವೆ ಎಂದು ಉಪನ್ಯಾಸಕರು ಭೀತಿ ತೋಡಿಕೊಂಡರು. ನಾಲ್ಕು ಅಂತಸ್ತಿನ ವಿವಿಧ ಕೋಣೆಗಳಲ್ಲಿ ಗೋಡೆ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಇಡೀ ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಉಪನ್ಯಾಸಕರು ಅಳಲು ತೋಡಿಕೊಂಡರು.
ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ, ಕಾಲೇಜು ಕಟ್ಟಡದ ಸುರಕ್ಷತೆಯ ಕುರಿತು ಇಡೀ ಕಾಲೇಜು ಕಟ್ಟಡದ ಸಮಗ್ರ ಪರಿಶೀಲನೆ ಮಾಡಿಸಲಾಗುವುದು.
> ಸಾಹಿತ್ಯ ಆಲದಕಟ್ಟೆ, ಸಹಾಯಕ ಆಯುಕ್ತೆ