ಅಫಜಲಪುರ: ಬಚಾವತ್ ಆಯೋಗದ ತೀರ್ಪಿನಂತೆ ಮಹಾರಾಷ್ಟ್ರ ಸರ್ಕಾರ 15 ಟಿಎಂಸಿ ನೀರು ಕರ್ನಾಟಕಕ್ಕೆ ಹರಿಸಬೇಕು ಎಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಭೀಮೆಯ ರೈತರ ಧ್ವನಿ ಪಾದಯಾತ್ರೆ ಸಹಸ್ರಾರು ರೈತರೊಂದಿಗೆ ಅಳ್ಳಗಿ(ಬಿ) ಗ್ರಾಮದಿಂದ ಬುಧವಾರ ಆರಂಭವಾಯಿತು.
ಶ್ರೀ ಡಾ.ಅಭಿನವ ಚನ್ನಮಲ್ಲ ಶಿವಾಚಾರ್ಯ ಮಾತನಾಡಿ, 50 ವರ್ಷದ ಹಿಂದೆಯೇ ಸಿಗಬೇಕಿದ್ದ ನ್ಯಾಯ ತಡವಾಗಿದ್ದರೂ ಪರವಾಗಿಲ್ಲ. ನ್ಯಾಯ ಸಿಗುವವರೆಗೂ ಈ ಹೋರಾಟ ಜೀವಂತವಿರಬೇಕು. ಭೂಮಂಡಲದಲ್ಲಿ ಅತ್ಯಮೂಲ್ಯವಾಗಿರುವ ನೀರು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಅನ್ಯ ಮಾರ್ಗದಿಂದ ಬಳಸುತ್ತಿರುವ ನಮ್ಮ ಪಾಲಿನ ನೀರಿಗಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ಪ್ರವಾಹ ಸಂದರ್ಭದಲ್ಲಿ ಬರುವ ನೀರನ್ನೇ ನಿಮ್ಮ ಪಾಲಿನ ನೀರು ಎಂದು ಹೇಳುತ್ತಿದೆ. ಆದರೆ ಅದು ನಮ್ಮ ನೀರಲ್ಲ. ಮಹಾ ಸರ್ಕಾರ ಹಿಡಿದಿಟ್ಟಿರುವ ನೀರಿನಲ್ಲಿ ಹಂತ ಹಂತವಾಗಿ ಬಿಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಹೋರಾಟಗಾರ ಶ್ರೀಮಂತ ಬಿರಾದಾರ ಮಾತನಾಡಿ, ಒಂದು ವರ್ಷದಿಂದ ನಮ್ಮ ಹಕ್ಕಿನ 15 ಟಿಎಂಸಿ ನೀರಿಗಾಗಿ ಒತ್ತಡ ಹಾಕುತ್ತಿದ್ದರೂ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಈಗಲಾದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚೆತ್ತುಕೊಂಡು ಮಹಾ ಸರ್ಕಾರದ ಜತೆ ಮಾತುಕತೆ ಅಥವಾ ಪತ್ರ ವ್ಯವಹಾರದ ಮೂಲಕ ಸಮಸ್ಯೆ ಬಗೆಹರಿಸಬೇಕು. ಸಾಧ್ಯವಾಗದಿದ್ದರೆ ಕೋರ್ಟ್ ಮೆಟ್ಟಿಲೇರಿ ಅನ್ನದಾತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಮುಂಗಾರು ಮಳೆ ಅಭಾವದಿಂದ ಕಂಗಾಲಾಗಿರುವ ರೈತರ ಟನ್ ಕಬ್ಬಿಗೆ ಸುಮಾರು 5,500 ರೂ. ನಿಗದಿಪಡಿಸಬೇಕು. ಉದ್ಯಮಿಗಳು ತಯಾರಿಸಿದ ಉತ್ಪನ್ನಕ್ಕೆ ಅವರೇ ಬೆಲೆ ನಿಗದಿಪಡಿಸಿದಂತೆ ರೈತರ ಉತ್ಪನ್ನಗಳಿಗೆ ಅವರೇ ದರ ನಿಗದಿ ಮಾಡುವಂತಾಗಬೇಕು. ಸೂಕ್ತ ಬೆಲೆ ನಿಗದಿಯಾಗದಿದ್ದರೆ ಹೋರಾಟ ಉಗ್ರ ರೂಪಕ್ಕೆ ತಾಳಲಿದೆ ಎಂದು ಎಚ್ಚರಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ ಪಾಟೀಲ್ ಮಾತನಾಡಿ, ಪಾದಯಾತ್ರೆ ಮೂಲಕ ತೆರಳಿ ಅ.16ರಂದು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸುತ್ತೇವೆ. ಹಾಗಂತ ಇದು ಹೋರಾಟದ ಅಂತ್ಯವಲ್ಲ, ಪ್ರಾರಂಭ. ಸಿಎಂ ವಿಶೇಷ ಕಾಳಜಿವಹಿಸಿ ಈ ಭಾಗದ ರೈತರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಶೆಟ್ಟಿ, ಚಂದ್ರಶೇಖರ ಕರಜಗಿ, ಮಂಜೂರ್ ಪಟೇಲ್, ರಜಾಕ್ ಪಟೇಲ್, ಚಿದಾನಂದ ಮಠ, ಅರವಿಂದ ಹಾಳಕಿ, ಭೀಮರಾವ ಗೌರ, ಶಂಕರ ಮ್ಯಾಕೇರಿ, ನಾಮದೇವ ಕಡಕೋಳ, ಶಾಂತಕುಮಾರ ಅಂಜುಟಗಿ, ನೂರ್ ಅಹ್ಮದ್ ಭಾಗವಾನ್, ಮುರುಘೇಂದ್ರ ಮಸಳಿ, ನಾನಾಗೌಡ ಪಾಟೀಲ್, ನಾಗರಾಜ ಬುಜರಿ, ಶರಣು ಅಳ್ಳಗಿ, ಶಿವಪ್ರಸಾದ ನೂಲಾ, ಗುರು ಚಾಂದಕವಟೆ, ಸಾಹೇಬಗೌಡ ಪಾಟೀಲ್, ಬಸವರಾಜ ಲಾಳಸಂಗಿ, ಕಲ್ಲಪ್ಪ ಅಂಜುಟಗಿ, ಸೋಮನಾಥ ಕರಜಗಿ, ಆನಂದ ಪಾಟೀಲ್ ಇತರರಿದ್ದರು.
ನಮ್ಮ ಪಾಲಿನ 15 ಟಿಎಂಸಿ ನೀರಿಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ, ಶ್ರೀ ಶಾಂತಲಿಂಗ ಶಿವಾಚಾರ್ಯ, ಶ್ರೀ ಶ್ರೀಕಂಠ ಶಿವಾಚಾರ್ಯ, ಶ್ರೀ ಅಭಿನವ ಪುಂಡಲಿಂಗ ಮಹಾಸ್ವಾಮೀಜಿ, ಶ್ರೀ ಕೈಲಾಸಲಿಂಗ ಶಿವಾಚಾರ್ಯ, ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯ, ಶ್ರೀ ಅಭಿನವ ಗುರುಬಸವ ಶಿವಾಚಾರ್ಯ, ದಾವಲ್ಮಲಿಕ್ ಮುತ್ಯಾ, ಗಂಗಾಧರ ಶಾಸಿ, ಬಸಯ್ಯ ಶಾಸ್ತ್ರಿ ಸಾಥ್ ನೀಡಿದರು.
ಅಳ್ಳಗಿ(ಬಿ)ಯಿಂದ ಬೆಳಗ್ಗೆ 10ಕ್ಕೆ ಶುರುವಾದ "ಭೀಮೆಯ ರೈತರ ಧ್ವನಿ" ಪಾದಯಾತ್ರೆ ಬಂಕಲಗಾ, ಶಿರವಾಳ, ಅಳ್ಳಗಿ ಕ್ರಾಸ್ ಮೂಲಕ ಅಫಜಲಪುರ ತಲುಪಿತು. ರಾತ್ರಿ ಅತನೂರಿನಲ್ಲಿ ವಸತಿ ಮಾಡಲಾಯಿತು. ಪಾದಯಾತ್ರೆಯುದ್ದಕ್ಕೂ ಅನ್ನದಾತರು ಹಕ್ಕಿನ ನೀರಿಗಾಗಿ ಜೈ ಜವಾನ್ ಜೈ ಕಿಸಾನ್, ಸದೃಢ ರೈತ ಸುಭದ್ರ ಭಾರತ, ನೇಗಿಲು ಹಿಡಿಯುವ ಕೈಗಳೇ ಪೆನ್ನು ಹಿಡಿಯುವ ಕೈಗಳಿಗೆ ಅನ್ನ ನೀಡುವ ಚಿನ್ನದ ಕೈಗಳು ಎಂಬ ಘೋಷಣೆ ಕೂಗುತ್ತ ಭಜನೆ, ಹಲಗೆಯೊಂದಿಗೆ ಅನ್ನದಾತರು ಹೆಜ್ಜೆ ಹಾಕಿದರು.