ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​  
ಕಲಬುರಗಿ

ಎಸ್ಸಿ-ಎಸ್ಟಿ ಸೌಲಭ್ಯ ವಿಳಂಬವಾಗದಿರಲಿ

ಕಲಬುರಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸಿಗಬೇಕಾದ ಸೌಲಭ್ಯ ವಿಳಂಬವಾಗಬಾರದು. ಪ್ರತಿಯೊಬ್ಬ ಅಧಿಕಾರಿ ತಮ್ಮ ಇಲಾಖೆಗೆ ಸಂಬಂಧಿಸಿದ ಕ್ರಿಯಾಯೋಜನೆ ಸಫಲತೆಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ನಿರ್ದೇಶನ ನೀಡಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಬುಧವಾರ ಕರೆದಿದ್ದ ಎಸ್​ಸಿಎಸ್​ಪಿ ಮತ್ತು ಟಿಎಸ್​ಪಿ ಜಿಲ್ಲಾ ಮಟ್ಟದ 2ನೇ ತೆಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಯಾವ ಕಾರಣಕ್ಕೂ ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಅನುದಾನ ಬಳಸಿಕೊಳ್ಳಬೇಕು. ವಿವಿಧ ಸರ್ಕಾರಿ ಯೋಜನೆ ಮತ್ತು ಅನುದಾನ ನಿಗದಿತ ಅವಧಿಯೊಳಗೆ ಶೇ.100 ಪ್ರಗತಿ ಸಾಧಿಸಬೇಕು ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಯೋಜನೆಯಡಿ ಜಿಲ್ಲಾ ಮತ್ತು ರಾಜ್ಯ ವಲಯಕ್ಕೆ 9,794.41 ಲಕ್ಷ ರೂ. ಹಂಚಿಕೆಯಾಗಿದ್ದು, ಇದರಲ್ಲಿ ರಾಜ್ಯ ವಲಯಕ್ಕೆ 8,051.17 ಲಕ್ಷ ಹಾಗೂ ಜಿಲ್ಲಾ ವಲಯಕ್ಕೆ 1,743.24 ಲಕ್ಷ ರೂ. ಹಂಚಿಕೆ ಮಾಡಲಾಗಿದ್ದು, ಬಿಡುಗಡೆಯಾದ 11,922.13 ಲಕ್ಷ ರೂ.ಗಳಲ್ಲಿ 10,709.43 ಲಕ್ಷ ರೂ. ಬಳಕೆಯಾಗಿದೆ ಎಂದು ತಿಳಿಸಿದರು.

ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳಲ್ಲಿನ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮತ್ತು ಅನುದಾನ ಬಳಕೆ ಪ್ರಗತಿ ಪರಿಶೀಲಿಸಲಾಯಿತು. ಮುಂದಿನ ಸಭೆಯೊಳಗೆ ಅರ್ಹರಿಗೆ ಅಗತ್ಯ ಸೌಲಭ್ಯ ತಲುಪಿಸಿ ವೆಚ್ಚದ ಪ್ರಗತಿಯನ್ನು ಕಡ್ಡಾಯವಾಗಿ ಸಾಧಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಲಾಯಿತು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ್​, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭಾರ ಮಧುಮತಿ, ಪ್ರೊಜೆಕ್ಟರ್​ ಯೋಜನಾ ನಿರ್ದೇಶಕ ಜಗದೇವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ್​, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಬೇಬಿಮುಗೇರ್​ ಇತರರಿದ್ದರು.

ಅನುಮೋದನೆಗೊಂಡ ಯೋಜನೆ ಮತ್ತು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಡಿಸೆಂಬರ್​ ವೇಳೆಗೆ ಪೂರ್ಣಗೊಳಿಸಿ ಬ್ಯಾಂಕ್​ಗಳ ಮೂಲಕ ಅಗತ್ಯ ಅನುದಾನ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು.
> ಇಕ್ರಮ್​ ಶರೀಫ್​ ಜಿಲ್ಲಾಧಿಕಾರಿ