ಚಿಂಚೋಳಿ: ಐನಾಪುರ ಭಾಗದ ದೀರ್ಕಾಲದ ಬೇಡಿಕೆಯಾಗಿದ್ದ ನೀರಾವರಿ ಯೋಜನೆ ಸಾಕಾರಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಐನಾಪುರ ಸಿದ್ಧಲಿಂಗೇಶ್ವರ ಹಿರೇಮಠದ ಶ್ರೀ ಉಪಮನ್ಯು ಶಿವಾಚಾರ್ಯರು ಹೇಳಿದರು.
ಚನ್ನೂರ ಡ್ಯಾಮ್ ಬಳಿ ಗುರುವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಐನಾಪೂರ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಯೋಜನೆಗಾಗಿ ರೈತರು ನಿರಂತರ ಹೋರಾಟ ಮಾಡಿದ್ದು, ಇದೀಗ ಫಲ ಸಿಕ್ಕಂತಾಗಿದೆ. ಸರ್ಕಾರ ಮತ್ತು ಗುತ್ತಿಗೆದಾರರು ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಐನಾಪುರ ಭಾಗದ 10 ಸಾವಿರ ಹೆಕ್ಟೇರ್ ಭೂಮಿಗೆ ನೀರುಣಿಸುವ ಯೋಜನೆಯಿಂದ ರೈತರ ಕೃಷಿ ಚಟುವಟಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ. ದೀರ್ಕಾಲದ ಹೋರಾಟದ ಫಲವಾಗಿ ಕಾಮಗಾರಿ ಆರಂಭವಾಗಿರುವುದು ಸ್ಥಳಿಯ ರೈತರು ಹಾಗೂ ಜನಸಾಮಾನ್ಯರಲ್ಲಿ ಹರ್ಷ ಮೂಡಿಸಿದೆ. ಕೃಷಿ ಪ್ರಗತಿಗೆ ಹೊಸ ಆಶಾಕಿರಣ ಮೂಡಿದಂತಾಗಿದೆ ಎಂದರು.
ಲೋಹಾರ ಮುಲ್ಲಾಮರಿ ಯೋಜನಾಧಿಕಾರಿ ಅಮೃತ ಪವಾರ್, ಪ್ರಮುಖರಾದ ವಿನಾಯಕ ಚವ್ಹಾಣ್, ವಿನಾಯಕ ದೇಶಪಾಂಡೆ, ವಿಶಾಲ್ ಚವ್ಹಾಣ್, ಧನರಾಜ ಸ್ವಾಮಿ, ಶಿವಾನಂದ ಮಾಲಿಪಾಟೀಲ್, ಅಡೆಪ್ಪ ಚನ್ನೂರ, ಸಾಯಿಬಣ್ಣ ರಾಂಪೂರ, ಸಲ್ಲಾವುದ್ದಿನ್ ಚನ್ನೂರ, ಹುಸೇನ್ ನಾಗರಾಳ, ಮೋಹನ ಐನಾಪುರ, ನಾಗರಾಜ ಐನಾಪುರ, ಭೀಮಶೆಟ್ಟಿ ಸಲಗರ, ಜಗನ್ನಾಥ ಜಮಾದಾರ, ನಾಗಶೆಟ್ಟಿ ಮದರಗಿ, ಸಿದ್ದು ಯಲ್ಮಾಮಡಿ ಇತರರಿದ್ದರಯ.
ಕಲ್ಯಾಣ ಕರ್ನಾಟಕ ಉತ್ಸವದಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕೃತವಾಗಿ ಯೋಜನೆ ಚಾಲನೆ ನೀಡಿದ್ದರು. ಇದೀಗ ಜಿಲ್ಲಾಧಿಕಾರಿಗಳು ತ್ವರಿತಗತಿ ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ. ಪೂಜ್ಯರ ಅಮೃತ ಹಸ್ತದಿಂದ ಗುತ್ತಿಗೆದಾರರು ಕೆಲಸ ಪ್ರಾರಂಭಿಸುತ್ತಿರುವುದು ಶುಭ ಸಂಕೇತವಾಗಿದೆ.> ಅಮೃತ ಪವಾರ್, ಎಇಇ, ಲೋಹಾರ ಮುಲ್ಲಾಮಾರಿ ಯೋಜನೆ, ಚಿಂಚೋಳಿ
ಕಳೆದ ಎರಡು ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಏತ ನೀರಾವರಿ ಯೋಜನೆ ಕಾಮಗಾರಿ ಪ್ರಾರಂಭಗೊಂಡಿದ್ದು, ರೈತರಲ್ಲಿ ಖುಷಿ ತಂದಿದೆ. ಅಧಿಕಾರಿಗಳು ಗುಣಮಟ್ಟದ ಕಾಮಗಾರಿಯೊಂದಿಗೆ ಶಾಶ್ವತವಾಗಿ ನೀರಿನ ಸಮಸ್ಯೆ ಹೋಗಲಾಡಿಸಬೇಕು.> ಶಿವಾನಂದ ಮಾಲಿಪಾಟೀಲ್, ಸಂಸ್ಥಾಪಕ ಅಧ್ಯಕ್ಷ, ಐನಾಪುರ ಏತ ನೀರಾವರಿ ಅಭಿವೃದ್ಧಿ ಸಮಿತಿ