ಕಮಲಾಪುರ: ಬರದ ಕಾರ್ಮೋಡ ಆವರಿಸಿದ್ದು, ಸಾಲ ಮಾಡಿ ಅಲ್ಪಸ್ವಲ್ಪ ಬೆಳೆ ಬೆಳೆದಿದ್ದೇವೆ. ಸದ್ಯ ಬೆಳೆಗಳಿಗೆ ನೀರಿನ ತುರ್ತು ಅಗತ್ಯವಿದೆ. ಗಂಡೋರಿ ಜಲಾಶಯದಿಂದ ನೀರು ಹರಿಸದಿದ್ದರೆ ಬೆಳೆಗಳು ಒಣಗಿ ಹೋಗಲಿವೆ. ರೈತರ ಹಿತದೃಷ್ಟಿಯಿಂದ ಜಲಾಶಯದಿಂದ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ ಸಾಹೇಬರೇ ಎಂದು ಮಹಾಗಾಂವ್ ಹೋಬಳಿ ವ್ಯಾಪ್ತಿಯ ರೈತರು ಅಳಲು ತೋಡಿಕೊಂಡ ಪ್ರಸಂಗ ಶುಕ್ರವಾರ ನಡೆಯಿತು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರಿ ಕಚೇರಿಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರೈತರು ಡಿಸಿ ಅವರನ್ನು ಭೇಟಿಯಾಗಿ ನೀರು ಹರಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಲಾಶಯದ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಹರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನೂತನ ತಾಲೂಕು ಕೇಂದ್ರವಾಗಿ ಕಮಲಾಪುರ ಘೋಷಣೆಯಾಗಿ ಹಲವು ವರ್ಷಗಳು ಕಳೆದಿದ್ದರೂ, ಗ್ರಾಮೀಣ ಭಾಗದ ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ಕಲಬುರಗಿಗೆ ಅಲೆದಾಡುವುದು ತಪ್ಪಿಲ್ಲ. ಈ ಕುರಿತು ಹಲವು ದೂರುಗಳು ಬಂದಿವೆ. ಆದ್ದರಿಂದ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿ ಶ್ರೀ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸೂಚಿಸಿದರು.
ಸುಮಾರು ಎಂಟು ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ಕಟ್ಟಡ ಕಾಮಗಾರಿ 2028ರ ಜನವರಿಯೊಳಗೆ ಪೂರ್ಣಗೊಳಿಸಿ ತಾಲೂಕು ಆಡಳಿತದ ಸುಪರ್ದಿಗೆ ನೀಡಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗಂಡೋರಿ ಜಲಾಶಯ, ಮಹಾಗಾಂವ್ ಕ್ರಾಸ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಡಕಚೇರಿ, ಧಮ್ಮೂರ (ಆರ್ಸಿ) ಗ್ರಾಮದ ನಾಡಕಚೇರಿ, ನವನಿಹಾಳದ ನೀರು ಶುದ್ಧೀಕರಣ ಟಕ, ಬೆಳಕೋಟಾ ಅಣೆಕಟ್ಟಿನ ಸಮೀಪ ಅಮೃತ್ 2.0 ಯೋಜನೆಯಡಿ ನಡೆಯುತ್ತಿರುವ ನೀರು ಸಂಗ್ರಹಣಾ ಬಾವಿ ನಿರ್ಮಾಣ ಕಾಮಗಾರಿ, ಕಮಲಾಪುರದಿಂದ ಜೀವಣಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆ ನೂತನ ಕಚೇರಿ ಕಟ್ಟಡ ಕಾಮಗಾರಿ ವೀಸಿದರು.
ಬಳಿಕ ತಹಸಿಲ್ ಕಚೇರಿಯಲ್ಲಿ ತಾಲೂಕಿಗೆ ಸಂಬಂಧಿಸಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಖನಿಜ ನಿಧಿ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಸಹಾಯಕ ಆಯುಕ್ತೆ ರಿತಿಕಾ ಶರ್ಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್, ತಹಸೀಲ್ದಾರ್ ಮಹಮ್ಮದ್ ಮೋಹಸಿನ್, ತಾಪಂ ಇಒ ರಮೇಶ ಪಾಟೀಲ್, ಪ್ರಮುಖರಾದ ಶರಣಬಸಪ್ಪ ಜಾಲಹಳ್ಳಿ, ಗಿರೀಶ ಪಾಟೀಲ್, ನರೇಶ ಹರಸೂರಕರ್, ಶ್ರೀಕಾಂತ ಪಾಟೀಲ್, ಅಂದಪ್ಪ ಓಕಳಿ, ಜೈಪ್ರಕಾಶ ಹಣಕುಣಿ ಇತರರಿದ್ದರು.
ಮಹಾಗಾಂವ ಕ್ರಾಸ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಗಿತಗೊಂಡಿರುವ ಕೊಠಡಿಗಳ ನಿರ್ಮಾಣ ಕಾಮಗಾರಿ ಪರಿಶೀಲನೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದಾಗ, ಸ್ಥಳಿಯರು ಕುಡಿಯುವ ನೀರಿನ ಸಮಸ್ಯೆ ಕುರಿತು ಅಳಲು ತೋಡಿಕೊಂಡರು. ಕಳೆದ ಎರಡು ವಾರಗಳಿಂದ ಕುಡಿಯಲು ನೀರು ಸಿಗುತ್ತಿಲ್ಲ. ನೀರು ಪೂರೈಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ಶಾಲೆಯ ಸುತ್ತಮುತ್ತಲಿನ ಚರಂಡಿಗಳು ತುಂಬಿದ್ದು, ದುರ್ವಾಸನೆ ಹರಡುತ್ತಿದೆ. ಸ್ವಚ್ಛತಾ ಕಾರ್ಯವೂ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಮಹಾಗಾಂವ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಸ್ಥಳಿಯರು ವೈದ್ಯಕಿಯ ಸೇವೆಗಳ ಕುರಿತು ದೂರು ಸಲ್ಲಿಸಿದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ. ರಾತ್ರಿ ವೇಳೆ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಬಂದರೆ ಅವರನ್ನು ಕಲಬುರಗಿಗೆ ಕಳುಹಿಸುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಡಿಸಿ, ಶ್ರೀ ಮತ್ತೊಬ್ಬ ವೈದ್ಯರನ್ನು ನೇಮಕ ಮಾಡುವುದರ ಜತೆಗೆ ಸಂಜೆ ವೇಳೆಯೂ ವೈದ್ಯಾಧಿಕಾರಿಗಳ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಮಲಾಪುರದಲ್ಲಿ ವಿವಿಧ ಇಲಾಖೆಗಳ ನೂತನ ಕಟ್ಟಡಗಳು ನಿರ್ಮಾಣವಾಗಿದ್ದು, ಕೆಲವು ಇಲಾಖೆಗಳ ಕಚೇರಿಗಳಿಗೆ ಕಟ್ಟಡಗಳ ಅಗತ್ಯವಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಕಟ್ಟಡಗಳನ್ನು ಕಚೇರಿ ಬಳಕೆಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.> ಇಕ್ರಮ್ ಶರೀಫ್, ಜಿಲ್ಲಾಧಿಕಾರಿ