ಕೋಲ್ಕತದಲ್ಲಿ ಇತ್ತೀಚೆಗೆ ನಡೆದ ಐಇಟಿಇ ಸಮಾವೇಶದಲ್ಲಿ ಡಾ.ಶರಣಬಸವಪ್ಪ ಅಪ್ಪ ಪ್ರಶಸ್ತಿಯನ್ನು ಡಾ.ಶ್ರೀಪರ್ಣಾ ಸಾಹಾ ಅವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ ಪ್ರದಾನ ಮಾಡಿದರು. ಪ್ರೊ.ಸಂಜೀವಕುಮಾರ ರುವಂಶಿ, ಡಾ.ಸಿಮ್ರನ್​ಜಿತ್​ಸಿಂಗ್​ ಇತರರಿದ್ದರು. 
ಕಲಬುರಗಿ

ಡಾ.ಶ್ರೀಪರ್ಣಾಗೆ ಡಾ.ಶರಣಬಸವಪ್ಪ ಅಪ್ಪ ಪ್ರಶಸ್ತಿ

ಕಲಬುರಗಿ: ತಂತ್ರಜ್ಞಾನ ಮತ್ತು ನಾವೀನ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರನ್ನು ಗೌರವಿಸುವ ಉದ್ದೇಶದಿಂದ ಪ್ರತಿಷ್ಠಿತ ಇನ್​ಸ್ಟಿಟ್ಯೂಷನ್​ ಆಫ್​ ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಶನ್​ ಇಂಜಿನಿಯರ್ಸ್​ (ಐಇಟಿಇ) ಸ್ಥಾಪಿಸಿದ ಪುಣೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ ವಿಭಾಗದ ಡಾ.ಶ್ರೀಪರ್ಣಾ ಸಾಹಾ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೆ.25ರಂದು ಕೋಲ್ಕತದಲ್ಲಿ ನಡೆದ 69ನೇ ವಾರ್ಷಿಕ ಐಇಟಿಇ ಸಮಾವೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಐಇಟಿಇ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಪ್ರಶಸ್ತಿಯನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಡಾ.ಶ್ರೀಪರ್ಣಾ ಸಾಹಾ ಅವರಿಗೆ ಪ್ರದಾನ ಮಾಡಿದರು. ಡಾ.ಶರಣಬಸವಪ್ಪ ಅಪ್ಪ ಪ್ರಶಸ್ತಿಗಾಗಿ 37 ಅರ್ಜಿ/ನಾಮನಿರ್ದೇಶನ ದಾಖಲಾಗಿದ್ದು, ತೀರ್ಪುಗಾರರ ಸಮಿತಿ ಡಾ.ಸಾಹಾ ಅವರ ವಿಶೇಷ ಪರಿಣತಿ ಕ್ಷೇತ್ರದ ಸಾಧನೆ ಹಾಗೂ ನವೀನ ಚಿಂತನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿತು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅವರು ಡಾ.ಶ್ರೀಪರ್ಣಾ ಸಾಹಾ ಅವರಿಗೆ ಅಭಿನಂದನೆ ಸಲ್ಲಿಸಿ ಆಶೀರ್ವದಿಸಿದ್ದಾರೆ. ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್​ ಮಾಕಾ, ಮೌಲ್ಯಮಾಪನ ಕುಲಸಚಿವ ಡಾ.ಎಸ್​.ಎಚ್​.ಹೊನ್ನಳ್ಳಿ, ಡೀನ್​ ಡಾ.ಶಿವಕುಮಾರ ಜವಳಿಗಿ ಇತರರು ಡಾ.ಶ್ರೀಪರ್ಣಾ ಅವರಿಗೆ ಶುಭ ಹಾರೈಸಿದ್ದಾರೆ.

ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣವರೆಗೆ ವಿದ್ಯಾಸಂಸ್ಥೆಗಳನ್ನು ಕಟ್ಟಿ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಹೆಸರಿನ ಪ್ರಶಸ್ತಿ ನನಗೆ ಸಿಕ್ಕಿರುವುದು ಸಂತಸ ತಂದಿದೆ. ಇನ್ನಷ್ಟು ಸಾಧನೆಗೆ ಈ ಪುರಸ್ಕಾರ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಿದೆ.
> ಡಾ.ಶ್ರೀಪರ್ಣಾ ಸಾಹಾ ಐಐಟಿ ಪುಣೆ