ಕಲಬುರಗಿ: ನಗರದ ತಾಜ ಸುಲ್ತಾನಪುರ ರಸ್ತೆಯ ಫಿಲ್ಟರ್ ಬೆಡ್ ಪ್ರದೇಶದಲ್ಲಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಗೃಹ ಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಕಲ್ಪಿಸುವ ಬಹುಕಟ್ಟಡಗಳ ಮನೆ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಬಿಫೌಜಿಯಾ ತರನ್ನುಮ್ ಅವರು ವೀಕ್ಷಣೆ ಮಾಡಿದರು.
ಸುಮಾರು 220 ಜನ ಪೌರಕಾರ್ಮಿಕರಿಗೆ ಇಲ್ಲಿನ ಅಪಾರ್ಟ್ ಮೆಂಟ್ ನಲ್ಲಿ ವಸತಿ ಕಲ್ಪಿಸುವ ಯೋಜನೆ ಇದಾಗಿದೆ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಶೀಘ್ರವೇ ಎಲೆಕ್ಟ್ರಿಕಲ್ ಟೆಂಡರ್ ಕರೆದು ವಿದ್ಯುತ್ತಿಕರಣ ಕೆಲಸ ಸಹ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಡಿ.ಸಿ. ನಿರ್ದೇಶನ ನೀಡಿದರು.
ನಂತರ ಖರ್ಗೆ ಪೆಟ್ರೋಲ್ ಪಂಪ್ ಬಳಿ ಅನ್ನಪೂರ್ಣ ಕ್ರಾಸ್ ನಿಂದ ಬರುವಂತ ಸವಾರರು ಮುಕ್ತವಾಗಿ ಎಡಕ್ಕೆ ತಿರುವು ಪಡೆದುಕೊಳ್ಳಲು ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಿಸಬೇಕು. ದ್ವಿಚಕ್ರ ಪಾರ್ಕಿಂಗ್, ಪದಾಚಾರಿಗಳಿಗೆ ಪೆಡೆಸ್ಟ್ರಿಯನ್ ನಿರ್ಮಾಣ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಂತರ ಖಣದಾಳ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಅವಶೇಷಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ಮರು ಬಳಕೆ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಲಾಗುತ್ತಿರುವ ಸಿ & ಡಿ ಘಟಕಕ್ಕೆ ಭೇಟಿ ನೀಡಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ಮಾಹನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಧೀಕ್ಷಕ ಅಭಿಯಂತ ದತ್ತಾತ್ರೇಯ,
ಕಾರ್ಯನಿರ್ವಾಹಕ ಅಭಿಯಂತ ಮಲ್ಲಿಕಾರ್ಜುನ ಎಂಪುರೆ, ಸಹಾಯಕ ಇಂಜಿನೀಯರ್ ಸಿದ್ದಲಿಂಗ ಗೌಳಿ ಮತ್ತಿತರು ಇದ್ದರು.