ರೈತರಿಗೆ ಸೂಕ್ತ ಬರ ಪರಿಹಾರ ನೀಡಬೇಕು, ಕಳಪೆ ರಸ್ತೆ ಕಾಮಗಾರಿ ಕುರಿತು ತನಿಖೆ ನಡೆಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಯಡ್ರಾಮಿ ತಾಲೂಕಿನ ಇಜೇರಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಯಡ್ರಾಮಿ& ಜೇವರ್ಗಿ ರಸ್ತೆಯಲ್ಲಿ ಸಂಚಾರ ಬಂದ್​ ಮಾಡಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್​ ಯಲ್ಲಪ್ಪ ಸುಬೇದಾರ್​ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಶ್ರವಣಕುಮಾರ ನಾಯಕ್​, ಪ್ರಭು ಸುಂಬಡ, ರವಿ ಯಂಕಂಚಿ, ಲಾಲ್​ ಪಟೇಲ್​, ಗುಂಡಪ್ಪ ಹಾಲಗಡ್ಲ, ಶರಣಗೌಡ, ರಮೇಶ ಮೇಲಗಿರಿ ಇತರರಿದ್ದರು. 
ಕಲಬುರಗಿ

ಕೂಡಲೇ ಬರ ಪರಿಹಾರ ವಿತರಣೆ ಮಾಡಿ

ಯಡ್ರಾಮಿ: ಬರಗಾಲದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಯಡ್ರಾಮಿ ತಾಲೂಕಿನ ಇಜೇರಿಯಿಂದ ಸೈದಾಪುರ ಕ್ರಾಸ್​ವರೆಗೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಳಪೆ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಇಜೇರಿ ಗ್ರಾಮದ ಯಡ್ರಾಮಿ&ಜೇವರ್ಗಿ ರಸ್ತೆಯಲ್ಲಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸರ್ಕಾರ ಕೃಷಿ ಸಂಬಂಧಿತ ಸಾಲ ಮನ್ನಾ ಮಾಡಬೇಕು. ರೈತರ ಅಳಿದುಳಿದ ಹತ್ತಿ, ತೊಗರಿ ಹಾಗೂ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಕೆಕೆಆರ್​ಡಿಬಿಯಿಂದ 25 ಕೋಟಿ ರೂ. ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 20 ಕೋಟಿ ರೂ. ಅನುದಾನದಲ್ಲಿ ಇಜೇರಿಯಿಂದ ಸೈದಾಪುರ ಕ್ರಾಸ್​ವರೆಗಿನ ರಸ್ತೆ ಡಾಂಬರೀಕರಣ ಹಾಗೂ ಇಜೇರಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಇವೆರಡು ಕಳಪೆ ಮಟ್ಟದಿಂದ ಕೂಡಿದ್ದು, ಸಮರ್ಪಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸುಮಾರು 7 ಗಂಟೆ ಸಂಚಾರ ಬಂದ್​ ಮಾಡಿ ಹೋರಾಟ ಮಾಡಲಾಯಿತು. ರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಭೋಜನ ಸವಿದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್​ ಯಲ್ಲಪ್ಪ ಸುಬೇದಾರ್​ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು.

ಪ್ರಮುಖರಾದ ಶ್ರವಣಕುಮಾರ ನಾಯಕ, ನಿಂಗಣ್ಣ ಚಿಗರಹಳ್ಳಿ, ಸೈದಪ್ಪ ಹೊಸಮನಿ, ದೇವು ಲಕಣಾಪುರ, ಬಸವರಾಜ ಕಿಲೇದಮನಿ, ಕಲ್ಯಾಣಿ ಹೂಗಾರ, ಭಿಮಣ್ಣ ಕಿಲೇದಮನಿ, ಮೌನೇಶ ಹಾಲಗಡ್ಲಾ, ಗುಂಡಪ್ಪ ಕಿಲೇದಮನಿ, ಬಸ್ಸು ಹೂಗಾರ, ಪ್ರಭು ಸುಂಬಡ, ರವಿ ಯಂಕಂಚಿ, ಲಾಲ್​ ಪಟೇಲ್​ ಚಿಗರಹಳ್ಳಿ, ಗುಂಡಪ್ಪ ಹಾಲಗಡ್ಲ, ಶರಣಗೌಡ, ರಮೇಶ ಮೇಲಗಿರಿ ಇತರರಿದ್ದರು.