- ಅನ್ನದಾಸೋಹ ಭವನಕ್ಕೆ ಅಡಿಗಲ್ಲು
- *3 ತಿಂಗಳಲ್ಲಿ ಘತ್ತರಗಾ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ:*
ಶ್ರೀ ದತ್ತಾತ್ರೆಯನ ಸುಕ್ಷೇತ್ರವಾದ ದೇವಲ ಗಾಣಗಾಪೂರ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶುಕ್ರವಾರ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ ಶ್ರೀ ದತ್ತಾತ್ರೇಯನ ದರ್ಶನ ಪಡೆದುಕೊಂಡ ನಂತರ ದೇವಸ್ಥಾನದ ಅಡಿಯಲ್ಲಿ ಬರುವ ಶ್ರೀ ತಂತುಕೇಶ್ವರ ದೇವಸ್ಥಾನದ ಅನ್ನದಾಸೋಹ ಭವನಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ದೇವಸ್ಥಾನದ ಭಕ್ತರುಗಳಾದ ವಿಜಯವಾಡ ಮೂಲದ ಶ್ರೀನಿವಾಸ ಮತ್ತು ಸುಕುಮಾರಿ ಕೊನೇರು ದಂಪತಿಗಳು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಅನ್ನದಾಸೋಹ ಭವನಕ್ಕೆ ನಿರ್ಮಿಸಲು ಮುಂದೆ ಬಂದಿರುವುದು ಸಂತೋಷದ ವಿಷಯ. ಹಣ ಎಲ್ಲರ ಬಳಿ ಇದೆ ಆದರೆ ದಾನ ಮಾಡುವ ಮನಸ್ಸು ಬೇಕಲ್ಲವೆ. ಇದಕ್ಕಾಗಿ ದಂಪತಿಗೆ ವಿಶೇಷ ಅಭಿನಂದನೆ ಸಲ್ಲಿಸುವೆ ಎಂದರು.
ಗಾಣಗಾಪೂರ ದೇವಸ್ಥಾನ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ಪ್ರಸಾದ ಯೋಜನೆಯಡಿ 83.52 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರು, ಕೇಂದ್ರ ಸರ್ಕಾರ ಅದನ್ನು ಪರಿಗಣಿಸಿಲ್ಲ. ಹೀಗಾಗಿ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲೆಯ ಶಾಸಕರೊಂದಿಗೆ ಚರ್ಚಿಸಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಸ್ಥಾನದ ಅಭಿವೃದ್ಧಿಗೆ ತಾವು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.
ರಸ್ತೆ, ಶೌಚಾಲಯ, ಕುಡಿಯುವ ನೀರು, ದಾಸೋಹ ಮನೆ, ಪಾರ್ಕಿಂಗ್, ಸ್ನಾನ್ ಘಾಟ್ ಹೀಗೆ ಒಟ್ಟು ಮೂರು ಹಂತದಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಈಗಾಗಲೆ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆ ಒಂದು ಸುತ್ತಿನ ಸಭೆ ಸಹ ನಡೆದಿದೆ. ಜಿಲ್ಲೆಯ ಸಚಿವರು ಮತ್ತು ಶಾಸಕರೊಂದಿಗೆ ಮತ್ತೊಮ್ಮೆ ಸಭೆ ಸೇರಿ ಮುಖ್ಯಮಂತ್ರಿಗಳ ಬಳಿ ಹೋಗಿ ಇದಕ್ಕಾಗಿ ಹೆಚ್ಚಿನ ಅನುದಾನ ನೀಡಲು ಕೋರಲಾಗುವುದು ಎಂದರು.
ಇದಕ್ಕು ಮುನ್ನ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ದೇವಸ್ಥಾನಕ್ಕೆ ವರ್ಷಕ್ಕೆ ಒಂದು ಕೋಟಿಗೂ ಹೆಚ್ಚು ಭಕ್ತರು ದರ್ಶನಕ್ಕೆ ಬರುತ್ತಾರೆ. ಮೂಲಸೌಕರ್ಯ ಇಲ್ಲದಿರುವುದಕ್ಕೆ ಭಕ್ತರು ಶಾಪ ಹಾಕುತ್ತಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವಿಂದ್ರ ಫಡನವೀಸ್ ಸೇರಿದಂತೆ ಅನೇಕ ಗಣ್ಯರು ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ. ಆದರೆ ದೇವಸ್ಥಾನ ಅಭಿವೃದ್ಧಿ ಕಂಡಿಲ್ಲ. ಸರ್ಕಾರ ವಿಶೇಷ ಕಾಳಜಿ ವಹಿಸಿ ಪ್ರಸಾದ್ ಯೋಜನೆ ಅಡಿಯಲ್ಲಿ ಹೆಚ್ಚಿನ ಅನುದಾನ ಒದಗಿಸಿ ದೇವಸ್ಥಾನ ಅಭಿವೃದ್ಧಿ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ ಸಂಜೀವಕುಮಾರ ದಾಸರ್, ಸಹಾಯಕ ಆಯುಕ್ತೆ ಸಾಹಿತ್ಯ, ಗಾಣಗಾಪೂರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ನಂತರ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ರಾಮಲಿಂಗಾರೆಡ್ಡಿ ಅವರು 102 ಕೋಟಿ ರೂ. ಮೊತ್ತದಲ್ಲಿ ಗಾಣಗಾಪೂರ ಮತ್ತು 40 ಕೋಟಿ ರೂ. ಮೊತ್ತದಲ್ಲಿ ಘತ್ತರಗಾ ದೇವಸ್ಥಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೂಲಂಕುಷವಾಗಿ ಚರ್ಚಿಸಿದರು. ಕಾಶಿ ಮಾದರಿಯಲ್ಲಿ ಗಾಣಗಾಪೂರ ಅಭಿವೃದ್ಧಿಗೆ ಜಮೀನು ಭೂಸ್ವಾಧೀನ ಅಗತ್ಯವಿದೆ ಮತ್ತು ಘತ್ತರಗಾ ಅಭಿವೃದ್ಧಿಗೆ ಅನುದಾನ ಲಭ್ಯವಿದ್ದು, ಸರ್ಕಾರ ಮಂಜೂರಾತಿ ನೀಡಬೇಕಿದೆ ಎಂಡು ಡಿ.ಸಿ. ಬಿ.ಫೌಜಿಯಾ ತರನ್ನುಮ್ ನೀಲಿ ನಕ್ಷೆಯೊಂದಿಗೆ ಸಚಿವರ ಗಮನಕ್ಕೆ ತಂದಾಗ ಮುಂಬರುವ ಸೆಷನ್ ಸಂದರ್ಭದಲ್ಲಿ ಈ ಬಗ್ಗೆ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭೂಸ್ವಾಧೀನ ಕುರಿತು ನಿರ್ಧಾರ ತೆಗದುಕೊಳ್ಳೊಣ ಎಂದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಅಫಜಲಪೂರ ತಾಲೂಕಿನ ಘತ್ತರಗಾದ ಶ್ರೀ ಭಾಗ್ಯವಂತಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 40 ಕೋಟಿ ರೂ. ಮೊತ್ತದ ಪ್ರಸ್ತಾವನೆ ಜಿಲ್ಲಾಡಳಿತದಿಂದ ಬಂದಿದ್ದು, ಕೂಡಲೆ ಅದಕ್ಕೆ ಅನುಮೋದನೆ ನೀಡಿ ಮುಂದಿನ 3-4 ತಿಂಗಳಿನಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಮೂಲಸೌಕರ್ಯ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದರು.