ಕಲಬುರಗಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಿ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶಕುಮಾರ್ ಅವರನ್ನು ವಜಾಗೊಳಿಸಲು ಆಗ್ರಹಿಸಿ ಇಂಡಿ ಒಕ್ಕೂಟದ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಗತ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್, ಸಿಪಿಎಂ, ಸಿಪಿಎಂ ಸೇರಿ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಚುನಾವಣೆ ಆಯೋಗದ ವಿರುದ್ಧ ಘೋಷಣೆ ಕೂಗಿ ಜ್ಞಾನೇಶಕುಮಾರ್ ಪ್ರತಿಕೃತಿಗೆ ಬೆಂಕಿ ಹಚ್ಚಿ, ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕಿರಣ ದೇಶಮುಖ ಮಾತನಾಡಿ, ಎಸ್ಐಆರ್ ಹೆಸರಿನಲ್ಲಿ ದೇಶಾದ್ಯಂತ ಅರ್ಹರನ್ನು ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನ ನಡೆಯುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ 1,054 ನಮೂನೆ-7 ಅರ್ಜಿ ಸಲ್ಲಿಕೆಯಾಗಿವೆ. ಅವುಗಳ ಬಳಕೆ ಅಥವಾ ದುರ್ಬಳಕೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಜನರಲ್ಲಿ ಅನುಮಾನ ಮೂಡಿದ್ದು, ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಲು ಹೋರಾಟ ಮುಂದುವರಿಯಲಿದೆ ಎಂದರು.
ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್ ಹರವಾಳ, ಪ್ರಮುಖರಾದ ಸುಭಾಷ ರಾಠೋಡ, ಮಹೇಶಕುಮಾರ ರಾಠೋಡ, ಮೌಲಾ ಮುಲ್ಲಾ, ಚಂದ್ರಿಕಾ ಪರಮೇಶ್ವರ, ಅ್ಜಲ್ ಮೆಹಮೂದ್, ಲತಾ ರಾಠೋಡ, ಡಾ.ಮೀನಾಕ್ಷಿ ಬಾಳಿ, ರೇವುನಾಯಕ ಬೆಳಮಗಿ, ಶಿವಾನಂದ ಹೊನಗುಂಟಿ, ಧರ್ಮರಾಜ ಹೇರೂರ, ಸಂತೋಷ ಪಾಟೀಲ್ ದಣ್ಣೂರ, ಲಿಂಗರಾಜ ತಾರೈಲ್, ಲವಿತ್ರ ವಸ್ತ್ರದ್, ನೀಲಕಂಠರಾವ ಮೂಲಗೆ, ಲಾಲ ಅಹಮ್ಮದ್ ಬಾಂಬೆ ಸೇಠ, ಗೌತಮ ಕರಿಕಲ್, ರೇಣುಕಾ ಸಿಂಗೆ, ಶಕೀಲ್ ಸರಡಗಿ, ಮಹೇಶ ಇತರರಿದ್ದರು.
ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ, ದೇಶದಲ್ಲಿ 13 ಕೋಟಿ ಮತಗಳ್ಳತನವಾಗಿದೆ ಎಂಬ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹೋರಾಟಗಾರರ ಬಂಧನ ಹಾಗೂ ಪ್ರತಿಭಟನೆಗಳನ್ನು ಹತ್ತಿಕ್ಕುವ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು.> ಡಾ.ಕಿರಣ ದೇಶಮುಖ ಕಾಂಗ್ರೆಸ್ ಜಿಲ್ಲಾಧ್ಯಕ್ಷ