ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸಭೆ
- ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಕಲಬುರಗಿ: ಪ್ರಸಕ್ತ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಮಳೆ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ 498.72 ಕೋಟಿ ರೂ. ಇನ್ಪುಟ್ ಸಬ್ಸಿಡಿ ಪರಿಹಾರ ಬಿಡುಗಡೆಯಾಗಿದ್ದು, ಹಣವನ್ನು ರೈತರ ಸಾಲದ ಖಾತೆಗೆ ಹೊಂದಾಣಿಕೆ ಅಥವಾ ಜಮೆ ಮಾಡುವಂತ್ತಿಲ್ಲ. ಉಲ್ಲಂಘಿಸಿದಲ್ಲಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ತಮ್ಮ ಕಚೇರಿಯಿಂದ ಜಿಲ್ಲೆಯ ಬ್ಯಾಂಕರ್ಸ್ಗಳೊಂದಿಗೆ ಗೂಗಲ್ ಮೀಟ್ ಆನ್ ಲೈನ್ ಸಭೆ ನಡೆಸಿ, ಬೆಳೆ ಪರಿಹಾರ ಯಾವುದೇ ಕಾರಣಕ್ಕೂ ಸಾಲದ ಖಾತೆಗೆ ಹೊಂದಾಣಿಕೆ ಮಾಡಬಾರದು ಎಂದು ಸ್ಪಷ್ಟ ಸೂಚನೆಯನ್ನು ನೀಡಿದರು.
ಅತಿವೃಷ್ಟಿಯಿಂದ ಬೆಳೆ ಹಾನಿಯಾದ 3,26,183 ರೈತರಿಗೆ ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಪರಿಹಾರದ ಜತೆಗೆ ಪ್ರತಿ ಹೆಕ್ಟೇರ್ಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 8,500 ರೂ. ಪರಿಹಾರ ಹಣ ಸೇರಿ ಜಿಲ್ಲೆಗೆ 498.72 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಪಾವತಿಸಿದೆ ಎಂದರು. ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರವಿಗೌಡ ಇತರರಿದ್ದರು.