ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿನ ಅಂತರ್ಜಲ ಹೆಚ್ಚಳಕ್ಕೆ ಅಗತ್ಯ ಯೋಜನೆಗಳ ಕುರಿತು ಶ್ರೀ ಡ್ಯಾಶ್ ಬೋರ್ಡ್ ತೆರೆದು, ಅಗತ್ಯತೆಗಳ ಕುರಿತ ಎಲ್ಲ ಮಾಹಿತಿ, ಶಾಸಕರ ಅಭಿಪ್ರಾಯ ಪಡೆದು ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಬರ ಆವರಿಸಿದ್ದು, ಅಂತರ್ಜಲ ಸಂರಕ್ಷಣೆಗೆ ಅಂತರ್ಜಲ ನಿರ್ದೇಶನಾಲಯದಿಂದ ಮಾಹಿತಿ, ಶಿಕ್ಷಣ, ಸಂಹವನ ಸಂಬಂಧಿತ ಚಟುವಟಿಕೆ ಆಂದೋಲನ ರೂಪದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅಂತರ್ಜಲ ಮರುಪೂರಣ, ಮಿತ ಬಳಕೆ, ಕೆರೆ ಕಟ್ಟೆಗಳ ಸಂರಕ್ಷಣೆ ಅರಿವು ಮೂಡಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ 2026&-27ನೇ ಸಾಲಿನಲ್ಲಿ 3,333 ಕೋಟಿ ರೂ. ನೀಡಲಾಗಿದೆ. ರಾಜ್ಯದ 3,810 ಕೆರೆಗಳ ಪೈಕಿ 925 ಕೆರೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. 2024-&25 ಮತ್ತು 2025-&26ನೇ ಸಾಲಿನಲ್ಲಿ 9,829 ಮತ್ತು ಗಿರಿಜನ ಉಪ ಯೋಜನೆಯಡಿ 6,165 ರೈತರಿಗೆ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಒದಗಿಸಿ ನೀರಾವರಿ ಸೌಲಭ್ಯ ಕಲ್ಪಿಸಿದೆ. 687 ಬ್ಯಾರೇಜ್ ಮತ್ತು ಚೆಕ್ ಡ್ಯಾಂ, ಕಿಂಡಿ ಆಣೆಕಟ್ಟು ನಿರ್ಮಿಸಿ 40,316 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ ಎಂದರು.
2026&-27ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ 1,811 ಕೋಟಿ ರೂ. ಅಂದಾಜು ಮೊತ್ತದಲ್ಲಿ 8 ಏತ ನೀರಾವರಿ ಯೋಜನೆ ಮೂಲಕ ಸುಮಾರು 88 ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. 2025&-26ರಲ್ಲಿ ಮಂಡಳಿ ಮತ್ತು ಸಣ್ಣ ನೀರಾವರಿ ಇಲಾಖೆ ಶೇ.50:-50 ಸುಮಾರು 200 ಕೋಟಿ ರೂ. ಅನುದಾನದಲ್ಲಿ ಶಿರಪುರ ಮಾದರಿಗೆ 13 ಕಾಮಗಾರಿ ಕೈಗೆತ್ತಿಕೊಂಡಿದ್ದು, 10.65 ಕೋಟಿ ರೂ. ಖರ್ಚು ಮಾಡಲಾಗಿದೆ. 2026&-27ನೇ ಸಾಲಿನಲ್ಲೂ ಕೆಕೆಆರ್ಡಿಬಿ, ಸಣ್ಣ ನಿರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ತಲಾ 75 ಕೋಟಿ ರೂ. ಸೇರಿ 225 ಕೋಟಿ ರೂ. ವೆಚ್ಚದಲ್ಲಿ ಪ್ರದೇಶದ ಉಳಿದ 25 ಕ್ಷೇತ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.
ಕಲಬುರಗಿಯಲ್ಲಿ ಪ್ರಸಕ್ತ 343 ಕೋಟಿ ರೂ. ವೆಚ್ಚದಲ್ಲಿ ಮೂರು ಏತ ನೀರಾವರಿ ಯೋಜನೆ ಮೂಲಕ 19 ಕೆರೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಸೇಡಂ ಬೀರನಳ್ಳಿ 89.30 ಕೋಟಿ ರೂ. ಕಾಚೂರು 82.50 ಕೋಟಿ ರೂ. ಯೋಜನೆ ಇವೆ. 197.71 ಕೋಟಿ ರೂ.ನಲ್ಲಿ ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ 9 ಕೆರೆಗೆ ಬೆಣ್ಣೆತೋರಾ ಜಲಾಶಯದಿಂದ ನೀರು ತುಂಬಿಸುವುದು, ಚಿತ್ತಾಪುರದಲ್ಲಿ 135 ಕೋಟಿ ರೂ. ಮೊತ್ತದಲ್ಲಿ 9 ಕೆರೆ ತುಂಬಿಸುವ ಯೋಜನೆ ಪ್ರಗತಿಯಲ್ಲಿವೆ. 130 ಕೋಟಿ ರೂ. ವೆಚ್ಚದಲ್ಲಿ ಜೇವರ್ಗಿ ತಾಲೂಕಿನ ಹರವಾಳ ಬ್ರಿಡ್ಜ್- ಕಂ- ಬ್ಯಾರೇಜ್ ನಿರ್ಮಿಸಲಾಗುತ್ತಿದೆ ಎಂದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಜಗದೇವ ಗುತ್ತೇದಾರ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ ಇದ್ದರು.