ಸೇಡಂ: ಅಸತ್ಯದ ವಿರುದ್ಧ ಸತ್ಯದ ಜಯವನ್ನು ಸಾರುವ ದಸರಾ ಹಬ್ಬವು ನವರಾತ್ರಿಗಳ ಸಂಭ್ರಮದೊಂದಿಗೆ ಭಾರತೀಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಜ್ಯ ಕೃಷಿಕ ಸಮಾಜದ ನಿರ್ದೇಶಕ ಬಸವರಾಜ ಪಾಟೀಲ್ ಊಡಗಿ ಹೇಳಿದರು.
ಶ್ರೀ ಪಂಚಲಿಂಗೇಶ್ವರ ಶಾಂಭವಿ ರಂಗಮಂಟಪದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 45ನೇ ವರ್ಷದ ದಸರಾ ಉತ್ಸವ ಉದ್ಘಾಟಿಸಿ ಮಾತನಾಡಿ, ಅನಾದಿಕಾಲದಿಂದಲೂ ದುಷ್ಟಶಕ್ತಿಗಳನ್ನು ಸಂಹರಿಸಿ, ಜಗತ್ತಿನ ಉದ್ಧಾರಕ್ಕಾಗಿ ವಿವಿಧ ಅವತಾರಗಳನ್ನು ತಾಳಿದ ದುರ್ಗಾಮಾತೆಯ ಆರಾಧನೆ ನವರಾತ್ರಿಯ ಸಂದರ್ಭದಲ್ಲಿ ಮನೆಮನಗಳಲ್ಲಿ ಭಕ್ತಿಭಾವದಿಂದ ನಡೆಯುತ್ತದೆ. ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಅಂಬಾ ಭವಾನಿ ಘಟಸ್ಥಾಪನೆ ನೆರವೇರಿಸಿ, ಸತತ ಒಂಬತ್ತು ದಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಾದರಿ ಎಂದರು.
ಕೋಡ್ಲಾ ಶಂಭುಲಿಂಗೇಶ್ವರ ಮಠದ ಶ್ರೀ ಶಂಭುಲಿಂಗ ಸ್ವಾಮೀಜಿ ಪ್ರವಚನ ನೀಡಿ, ತಾಯಿಯಲ್ಲಿ ಸರ್ವಶ್ರೇಷ್ಠ ಶಕ್ತಿಯಿದೆ. ತಾಯಿ ಶಾಂಭವಿ, ದೇವಿ ಹಾಗೂ ದುರ್ಗೆಯ ರೂಪದಲ್ಲಿರುವ ಸಿಶಕ್ತಿಗೆ ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಪೂಜ್ಯನಿಯ ಸ್ಥಾನವಿದೆ. ಮಾನವ ಧಾರ್ಮಿಕತೆಯ ಮೂಲಕ ನೆಮ್ಮದಿ ಕಂಡುಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಡಾ.ವಿನೋದ ಸಂಗಾವಿ ಮಾತನಾಡಿ, ದಸರಾ ಹಾಗೂ ನವರಾತ್ರಿ ಉತ್ಸವಗಳು ಭಾರತೀಯ ಸಾಂಸತಿಕ ಪರಂಪರೆಯನ್ನು ಮತ್ತೆ ಮತ್ತೆ ಎತ್ತಿಹಿಡಿಯುತ್ತವೆ. ಪಂಚಲಿಂಗೇಶ್ವರ ದೇವಾಲಯ ಹಾಗೂ ದಸರಾ ಸಮಿತಿ ಒಂಬತ್ತು ದಿನ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ದಿನನಿತ್ಯದ ಒತ್ತಡದ ಬದುಕಿಗೆ ವಿರಾಮ ನೀಡುತ್ತಿದ್ದಾರೆ ಎಂದು ಶ್ಲಾಸಿದರು.
ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸದಾಶಿವ ಸ್ವಾಮೀಜಿ, ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ, ಪ್ರಮುಖರಾದ ಸಂತೋಷ ಕುಲಕರ್ಣಿ, ಅನಂತರೆಡ್ಡಿ ಪಾಟೀಲ್, ಸುಧಾಕರ ಕುಲಕರ್ಣಿ, ನಾಗಭೂಷಣ ಯಲಗಾರ, ರಾವೇಂದ್ರ ಅಗನೂರು, ಆನಂದರೆಡ್ಡಿ ತುಳೇರ, ಜನಾರ್ಧನರೆಡ್ಡಿ ತುಳೇರ, ಸಿದ್ದಪ್ರಸಾದರೆಡ್ಡಿ ಇದ್ದರು.
ಮೈಮೇಲಿನ ಕೊಳೆಯನ್ನು ಸೋಪು, ಶಾಂಪುಗಳಿಂದ ತಾತ್ಕಾಲಿಕವಾಗಿ ತೊಳೆಯಬಹುದು. ಆದರೆ ಪ್ರವಚನ ಹಾಗೂ ಸತ್ಸಂಗಗಳ ಮೂಲಕ ಮಾತ್ರ ಮಾನವನ ಅಂತರಂಗದ ಕೊಳೆ ತೊಳೆದು ಶುದ್ಧಗೊಳಿಸಲು ಸಾಧ್ಯ. ಪ್ರತಿಯೊಬ್ಬರೂ ಧರ್ಮಕಾರ್ಯಗಳಲ್ಲಿ ಭಾಗಿಯಾಗಬೇಕು.> ಶ್ರೀ ಶಂಭುಲಿಂಗ ಸ್ವಾಮೀಜಿ, ಕೋಡ್ಲಾ