thief arrested in kalaburagi 
ಕಲಬುರಗಿ

ಕಲಬುರಗಿಯಲ್ಲಿ ಖತರ್ನಾಕ ಕಳ್ಳನ ಬಂಧನ: 10.30 ಲಕ್ಷದ ಸ್ವತ್ತು ಜಪ್ತಿ

ಕಲಬುರಗಿ: ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಏಳು ಮನೆಗಳ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 10.30 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ತಿಳಿಸಿದರು.
ಚಿತ್ತಾಪುರ ತಾಲೂಕಿನ ಯರಗಾಲ್​ ಗ್ರಾಮದ ನಿವಾಸಿ, ಸಂತೋಷ ಕಾಲನಿಯಲ್ಲಿ ವಾಸಿಸುತ್ತಿರುವ ಮಲ್ಲಿಕಾರ್ಜುನ ತಳವಾರ (33) ಬಂಧಿತ ಆರೋಪಿಯಾಗಿದ್ದು, ಬಂಧಿಸಿ ವಿಚಾರಿಸಿದಾಗ ಒಟ್ಟು ಅಶೋಕ ನಗರ ಠಾಣೆ ವ್ಯಾಪ್ತಿಯ ಏಳು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತನಿಂದ 63 ಗ್ರಾಂ ಬಂಗಾರದ ಆಭರಣ, ನಗದು 30 ಸಾವಿರ ರೂ. ಸೇರಿ ಒಟ್ಟು 10.30 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಬಂಧಿತನೂ ಮನೆಯಲ್ಲಿ ಯಾರೂ ಇಲ್ಲದ, ಕೀಲಿ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ಕೀಲಿ ಮುರಿದು, ಕಳ್ಳತನ ಎಸಗುತ್ತಿದ್ದ ಎಂದು ತಿಳಿಸಿದರು.
ಡೆವರ್​ ಕಳ್ಳನಾದ: ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ ಮೊದಲ ಹೆಂಡತಿಯನ್ನು ಬಿಟ್ಟಿದ್ದು, ಮತ್ತೊಬ್ಬ ಮಹಿಳೆ ಜತೆ ಸಹ ಜೀವನ ನಡೆಸುತ್ತಿದ್ದ. ಕುಡಿತ, ಗ್ಯಾಂಬ್ಲಿಗ್​ ದಾಸನಾಗಿದ್ದ ಈತನು ಕಳ್ಳತನ ಕೃತ್ಯಕ್ಕೆ ಇಳಿದಿದ್ದ. ಅಶೋಕ ಠಾಣೆ ವ್ಯಾಪ್ತಿಯ ಹೀರಾ ನಗರ, ಕೆಆರ್​ಟಿಸಿ ನಗರ, ಕರುಣೇಶ್ವರ ನಗರ, ಸಂತೋಷ ಕಾಲನಿ ಸೇರಿ ವಿವಿಧೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದರು.
ಒಂದೇ ಬಟ್ಟೆ ನೀಡಿತ್ತು ಸುಳಿವು: ಕಳ್ಳತನ ಪ್ರಕರಣಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರಿಗೆ ಒಂದೇ ಬಟ್ಟೆಯನ್ನು ಧರಿಸಿದ ವ್ಯಕ್ತಿಯೂ ಎರಡು ಕಳ್ಳತನ ನಡೆದ ಪ್ರದೇಶದಲ್ಲಿ ಸಂಚರಿಸಿದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ವೈಜ್ಞಾನಿಕ ಮಾಹಿತಿ ಕಲೆಹಾಕಿ ಬಂಧಿಸಲಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ, ಪಿಐ ಸತೀಶ ಕಣಮೇಶ್ವರ ನೇತೃತ್ವದಲ್ಲಿ ಸಿಬ್ಬಂದಿ ವೈಜನಾಥ, ಶಿವಪ್ರಕಾಶ, ಮುಜಾಹಿದ್​, ಕರಣ್​, ನೀಲಕಂಠರಾಯ, ಚಂದ್ರಶೇಖರ, ಹರಿಕಿಶೋರ ಅವರನ್ನು ಒಳಗೊಂಡ ತಂಡ ಮಾಹಿತಿ ಕಲೆ ಹಾಕಿ, ಬಿದ್ದಾಪುರ ಕಾಲನಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ವಶಕ್ಕೆ ಪಡೆದು, ಬಂಧಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಶ್ಲಾಘಿಸಿದರು.
ಡಿಸಿಪಿಗಳಾದ ಶಾಲೂ, ಪ್ರವಿಣ ಎಚ್​.ನಾಯಕ ಇತರರಿದ್ದರು.