- ಕಾಂಗ್ರೆಸ್ ಸರ್ಕಾರದ ವಿರುದ್ಧ ಗೋವಿಂದ ಕಾರಜೋಳ ಕಿಡಿ
ಕಲಬುರಗಿ: ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತ ದೌರ್ಜನ್ಯ ಹೆಚ್ಚಾಗಿದ್ದು, ದಲಿತ ಮಹಿಳೆಯರ ಅತ್ಯಾಚಾರ, ಕೊಲೆ ಹೆಚ್ಚಾಗಿವೆ. ದಲಿತರ 48 ಸಾವಿರ ಕೋಟಿ ರೂ. ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಒಳಮೀಸಲಾತಿಯನ್ನು ನ್ಯಾಯಯುತವಾಗಿ ಹಂಚಿಕೆ ಮಾಡುವ ಮನಸ್ಸು ಸಿದ್ದರಾಮಯ್ಯಗೆ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ವಿಷಯದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ, ನಾಗಮೋಹನದಾಸ, ಮಾಧುಸ್ವಾಮಿ ವರದಿ, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೇ ಮನಸೋ ಇಚ್ಚೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ, ಶೇ.17 ಮೀಸಲಾತಿಯನ್ನು ಕೋರ್ಟ್ ತಡೆ ನೀಡಲಿಲ್ಲ. 2022ರಿಂದ 2025ರವರೆಗೆ ಎಲ್ಲರೂ ಅದರ ಲಾಭ ಪಡೆದಿದ್ದಾರೆ. ನಂತರ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಎಂದು ಸಂವಿಧಾನವೇ ಹೇಳಿದ್ದು, ಸಿದ್ದರಾಮಯ್ಯ ಗೊಂದಲ ಸೃಷ್ಟಿಸಿದ್ದು, ಕೋರ್ಟ್ನಲ್ಲಿ ಕೇಸ್ ಬೀಳುವಂತೆ ಮಾಡಿ, ಸಮಸ್ಯೆ ಜೀವಂತವಾಗಿ ಇಡುವ ಪ್ರಯತ್ನ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
2022ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ ಮೀಸಲಾತಿ 15ರಿಂದ ಶೇ.17ಕ್ಕೆ ಹೆಚ್ಚಿಸಿತು. ಸರ್ವಪಕ್ಷ ಸಭೆ ಕರೆದು, ಅಭಿಪ್ರಾಯ ಪಡೆದಿದ್ದರು. ಪ್ರಸ್ತುತ ಸರ್ಕಾರ ಒಂದೇ ಒಂದು ಸಭೆ ಕರೆದಿಲ್ಲ. ಹಿಂದೆ ಮೀಸಲಾತಿ ಹೆಚ್ಚಿಸಿ, ಕಾನೂನು ರಕ್ಷಣೆ ಒದಗಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಸುಳ್ಳು ಹೇಳಿ, ಲಾಭಪಡೆದರು. 2025ರಲ್ಲಿ ಒಳಮೀಸಲಾತಿ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರ್ಕಾರ ವಾದ ಮಂಡಿಸುವಲ್ಲಿ ವಿಲವಾಗಿದೆ ಎಂದರು.
ಹೆಚ್ಚಳವಾದ ಶೇ.6 ಮೀಸಲಾತಿ ಕುರಿತು ಕೋರ್ಟ್ನಲ್ಲಿ ವಾದ ಮಂಡಿಸದೇ ಶೇ.50 ಮೀಸಲಾತಿ ಮುಂದುವರಿಸಲು ಬೇಡಿಕೆ ಇಟ್ಟಿದ್ದರಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರ ಸ್ಟೇ ತೆರವಿಗೆ ಪ್ರಯತ್ನಿಸುತ್ತಿಲ್ಲ. 2026 ೆ.26ರಂದು ಶೇ.17 ವರ್ಗಕ್ಕೆ ರಾಜ್ಯಪಾಲರ ಸಹಿ ಪಡೆಯಲಾಗಿದೆ. ಅಂದೇ ಸಂಜೆ ಮೀಸಲಾತಿ ಶೇ.56 ಅಲ್ಲ, ಶೇ.50 ಎಂದು ತೀರ್ಮಾನಿಸಲಾಗಿದೆ. ಉಪಚುನಾವಣೆ ಕಾರಣಕ್ಕೆ ಶೇ.5.25, 5.25, 4.30 ಮೀಸಲಾತಿ ನಿರ್ಧರಿಸಿದ್ದು, ಪರಿಶಿಷ್ಟ ಜಾತಿಗಳ ಎಲ್ಲ ಗುಂಪಿನಲ್ಲಿ ಗೊಂದಲ ಮುಂದುವರಿದಿದೆ. ಸ್ಪಷ್ಟತೆ ಸರ್ಕಾರದ ಬಳಿ ಇಲ್ಲ ಎಂದರು.
9ನೇ ಶೇಡ್ಯೂಲ್ಗೆ ಶೇ.56 ಮೀಸಲಾತಿ ಸೇರಿಸಬೇಕು ಎಂದು ಹೇಳಿಕೆ ನೀಡುತ್ತಿದ್ದು, ಹಿಂದಿನ ಹಲವು ರಾಜ್ಯಗಳ ಪ್ರಕರಣಗಳಲ್ಲಿ ಇದು ವಿಲವಾಗಿದೆ. ಎಸ್ಸಿ, ಎಸ್ಟಿ ಮೀಸಲಾತಿ ಶೇ.50 ಹೆಚ್ಚಳಕ್ಕೆ ಸುಪ್ರೀಂಕೋರ್ಟ್ ಎಂದೂ ತಡೆಯಾಜ್ಞೆ ನೀಡಿಲ್ಲ. ಓಬಿಸಿ ಹೆಚ್ಚಳಕ್ಕೆ ತಡೆಯಾಜ್ಞೆ ನೀಡಿದೆ. ಸಿದ್ದರಾಮಯ್ಯ ಸರ್ಕಾರ ಶೇ.56 ಹೆಚ್ಚಳಕ್ಕೆ ಯಾವುದೇ ಪ್ರಯತ್ನ ಮಾಡದೇ ಸುಳ್ಳು ಹರಡುತ್ತಿದೆ. ಶ್ರೀದಲ್ಲಿ ಮಧುಸೂಧನ ವರದಿ ಅಂತಾ ಹೇಳಿ ಶೇ.70 ಮೀಸಲಾತಿ ಹೆಚ್ಚಿಸುತ್ತೇವೆ ಎಂದು ಸುಳ್ಳು ಹರಡುತ್ತ, ಕಾಲಹರಣ ಮಾಡುತ್ತದೆ ಎಂದು ಭವಿಷ್ಯ ನುಡಿದರು.
ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶರಣಪ್ಪ ತಳವಾರ, ಆನಂದ ಪಾಟೀಲ್, ಬಾಬುರಾವ ಹಾಗರಗುಂಡಗಿ ಇತರರಿದ್ದರು.
ಖುರ್ಚಿ ಕಂಟಕಕ್ಕೆ ಬಂದಾಗ ವಿವಾದ
ಸಿದ್ದರಾಮಯ್ಯಗೆ ಬದ್ಧತೆ ಇಲ್ಲ. ಖುರ್ಚಿಗೆ ಕಂಟಕ ಬಂದಾಗಲೊಮ್ಮೆ ಹಿಜಾಬ್, ಒಳ ಮೀಸಲಾತಿ, ಓಬಿಸಿ ಮೀಸಲಾತಿ ಎಂದು ವಿವಾದ ಸೃಷ್ಟಿಸಿ, ವಿಷಯಾಂತರ ಮಾಡುತ್ತಿದ್ದಾರೆ. ಹಿಜಾಬ್ ವಿವಾದ ಅಗತ್ಯವೇ ಇರಲಿಲ್ಲ. ಸಮವಸ್ತ್ರ ವ್ಯತ್ಯಾಸ ಅರಿಯಬೇಕು. ಯಾರೇ ಇದ್ದರೂ ಸಮವಸ್ತ್ರ ವ್ಯತ್ಯಾಸವಾಗಬಾರದು ಎಂದು ನಿಯಮ ಮಾಡಿದ್ದು, ಸಿದ್ದರಾಮಯ್ಯ ಅದನ್ನು ಮರೆತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದರು. ಎಸ್ಐಆರ್ ಅಕ್ರಮ ಮತಗಳನ್ನು ತೆಗೆದು ಹಾಕುತ್ತದೆ. ಕಳ್ಳತನ ಆಗಬಾರದು ಎಂದು ಮಾಡಲಾಗುತ್ತದೆ. ದುರುಪಯೋಗದ ಮಾತೇ ಇಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ ಎಂದರು.
ಬಿಎಸ್ ಯಡಿಯೂರಪ್ಪ 50 ವರ್ಷ ಸಮಾಜ ಸೇವೆಗೆ ಜೀವನ ಅರ್ಪಿಸಿದ್ದಾರೆ. 50 ವರ್ಷದಲ್ಲಿ 43 ವರ್ಷ ವಿರೋಧ ಪಕ್ಷದಲ್ಲಿದ್ದು, ಜನರ ಧ್ವನಿಯಾಗಿದ್ದಾರೆ. ಕೇವಲ ಏಳು ವರ್ಷ ಅಧಿಕಾರದಲ್ಲಿದ್ದರು. 2023ಕ್ಕೆ ಚುನಾವಣೆ ರಾಜಕೀಯಕ್ಕೆ ನಿವೃತ್ತರಾದ್ದರಿಂದ ನಾನು ಕಾರ್ಯಕ್ರಮ ಮಾಡಿದ್ದೇನೆ ಹೊರತು, ವಿಜಯೇಂದ್ರಗೆ ಏನೂ ಸಂಬಂಧವಿಲ್ಲ. ಗೌರವಿಸುವುದು ನಮ್ಮ ಕರ್ತವ್ಯ ಎಂದರು.