ಆಳಂದ: ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವ ಬೆನ್ನಲ್ಲೆ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಧಂಗಾಪುರ ಗ್ರಾಮದಲ್ಲಿ ಕೊಡ ನೀರಿಗಾಗಿ ಜನರು ನಿತ್ಯ ಪರದಾಡುವಂತಾಗಿದ್ದು, ಮಹಿಳೆಯರು ದೂರದ ಪ್ರದೇಶಗಳಿಂದ ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಧಂಗಾಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದರೂ ಕುಡಿವ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿಗಳಿದ್ದು, ಅವುಗಳಲ್ಲಿ ಎರಡು ಈಗಾಗಲೇ ಬತ್ತಿಹೋಗಿವೆ. ಎರಡು ತೆರೆದ ಬಾವಿಗಳಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಲಭ್ಯವಿರುವ ನೀರಿನ ಮೂಲಗಳ ಸಮರ್ಪಕ ನಿರ್ವಹಣೆ ಮಾಡದಿರುವುದರಿಂದಲೇ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮದ ಯಶ್ವಂತ ನಗರ ಹಾಗೂ ಶರಣ ನಗರ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಇಲ್ಲಿನ ಮಹಿಳೆಯರು ನಿತ್ಯ 23 ಕಿಮೀ ದೂರ ತೆರಳಿ ನೀರು ತಂದುಕೊಳ್ಳಬೇಕಾಗಿದೆ. ಬೆಳಗ್ಗಿನಿಂದಲೇ ನೀರಿಗಾಗಿ ಸರದಿಯಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದ್ದು, ಕೆಲಸ ಕಾರ್ಯಗಳನ್ನು ಬದಿಗೊತ್ತಿ ನೀರು ಸಂಗ್ರಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿವ ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಪಿಡಿಒಗೆ ಹಲವು ಬಾರಿ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಕರೆ ಮಾಡಿದರೆ ಉತ್ತರಿಸುವುದಿಲ್ಲ. ಸರಿಯಾಗಿ ಕಚೇರಿಗೆ ಆಗಮಿಸುವುದಿಲ್ಲ. ನೀರಿಲ್ಲದಿದ್ದರೆ ನಾನೇನು ಮಾಡಲಿ ಎಂದು ಬೇಜವಾಬ್ದಾರಿಯುತವಾಗಿ ಉತ್ತರಿಸುತ್ತಾರೆ. ಸ್ಥಳಿಯ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ತಿಳಿಯದಂತಾಗಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಧಂಗಾಪುರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಶೀಘ್ರ ಸಮರ್ಪಕ ನೀರು ಪೂರೈಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಬೀಗ ಹಾಕಿ ಹೋರಾಟ ನಡೆಸಬೇಕಾಗುತ್ತಿದೆ.> ಆಲೂಗೌಡ ಪಾಟೀಲ್, ಸ್ಥಳಿಯ ನಿವಾಸಿ
ಧಂಗಾಪುರದಲ್ಲಿನ ಕುಡಿವ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಕೂಡಲೇ ಸ್ಪಂದಿಸಿ ಗ್ರಾಮಕ್ಕೆ ಕುಡಿವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.> ಹೊನ್ನೇಶ ಅಳಗಿ, ಆಡಳಿತಾಧಿಕಾರಿ