- ಮಲ್ಲಿಕಾರ್ಜುನ ಜಿನಕೇರಿ ಆರೋಪ
- ಒಳಮೀಸಲು ಮಹಾಮೋಸ
ಕಲಬುರಗಿ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿ ಮಾಡದೇ ಸುಳ್ಳು, ಗೊಂದಲದ ಆದೇಶಗಳನ್ನು ಹೊರಡಿಸಿ ನಿರಂತರವಾಗಿ ಮಾದಿಗ ಸಮಾಜಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ನಗರಾಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ ಆರೋಪಿಸಿದರು.
ಸರ್ಕಾರ ಮೇ 13ರ ನೇಮಕಾತಿ ಆದೇಶ, ರೋಸ್ಟರ್ ನಿಯಮಾವಳಿಗಳಲ್ಲಿ ಒಳಮೀಸಲು ರ್ನಿಲಸಿದ್ದು, ಗೆಜೆಟೆಡ್ ಕ್ಲಾಸ್&1 ಮತ್ತು ಕ್ಲಾಸ್&2ರ ಹುದ್ದೆಗಳಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ ಆಗಲಿದೆ. ಸುಪ್ರೀಂ ಕೋರ್ಟ್ ಆದೇಶವಿದ್ದರೂ 35 ವರ್ಷದ ಸುದೀರ್ ಹೋರಾಟಕ್ಕೆ ದೊರೆಯದಂತೆ ಮಾಡಲಾಗುತ್ತಿದೆ ಎಂದು ಸೋಮವಾರ ಕಿಡಿ ಕಾರಿದರು.
ಸರ್ಕಾರ ಒಳಮೀಸಲಾತಿಯಲ್ಲಿ ನಿರಂತರವಾಗಿ ಗೊಂದಲಗಳನ್ನು ಇಟ್ಟಿದ್ದು, ಅವರ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಲೋಪದೋಷಗಳನ್ನು ಸರಿಪಡಿಸಿ, ಎಲ್ಲ ಒಳಪಂಗಡಗಳಿಗೆ ಜನಸಂಖ್ಯೆ ಆಧಾರದಲ್ಲಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಅಂಬಾರಾಯ ಬೇಳಕೋಟಿ, ಬಂಡೇಶ ರತ್ನಡಿಗ, ಕೃಷ್ಣಾ ತಂಗಡಗಿ, ಪ್ರದಿಪ ಬಾಚನಾಳ ಇತರರಿದ್ದರು.
ಮೂರು ದಶಕದ ಸುದೀರ್ ಹೋರಾಟದಿಂದ ಒಳ ಮೀಸಲಾತಿ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದ್ದು, ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ಆದರೆ ಜಿಲ್ಲೆಯ ಕಾಂಗ್ರೆಸ್ ಮುಖಂಡ ಲಿಂಗರಾಜ ತಾರೈಲ್ ಸಮಾಜದ ಹೆಸರಲ್ಲಿ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ. ಮಾದಿಗ ಸಮಾಜಕ್ಕೆ ನ್ಯಾಯ ನೀಡಿದ್ದು, ಬಿಜೆಪಿ. ಸಮಾಜದ ಹಿತದ ಬಗ್ಗೆ ಮಾತಾಡಲಿ. ರಾಜಕೀಯ ಮಾಡಿದರೆ ಹೊಡೆತ ಬೀಳಲಿದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮಲ್ಲಿಕಾರ್ಜುನ ಜಿನಕೇರಿ ಹೇಳಿದರು.