ಕಲಬುರಗಿ

ಮುಲ್ಲಾಮಾರಿ ಜಲಾಶಯ ನೀರು ಬಿಡುಗಡೆ: ರೈತ ಸಂಘಟನೆಗೆ ಸಿಕ್ಕ ದೊಡ್ಡ ಜಯ

ಚಿಂಚೋಳಿ: ಚಿಂಚೋಳಿ ತಾಲೂಕಿನ ಭೋಗಾವತಿ ನದಿ ಪಾತ್ರದ ರೈತರಿಗೆ, ಜಾನುವಾರುಗಳಿಗೆ ಹಾಗೂ ಪಕ್ಷಿಗಳಿಗೆ ಅನುಕೂಲವಾಗುವಂತೆ ಲೋಹಾರ ಮುಲ್ಲಾಮಾರಿ ಜಲಾಶಯದಿಂದ 0.5 ಟಿ.ಎಮ್.ಸಿ ನೀರನ್ನು ಹರಿಸಲು ಶ್ರಮಿಸಿದ ಶಾಸಕರಿಗೆ ಹಾಗೂ ಎಲ್ಲಾ ರೈತ ಮುಖಂಡರಿಗೆ ತಾಲೂಕಿನ ರೈತರ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ಪ್ರಗತಿಪರ ರೈತ ರಮೇಶ ಗೌಳಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ರೈತರು ಒಗ್ಗಟ್ಟಾಗಿ ಸಂಘಟಿತರಾಗುತ್ತಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ. "ನಮ್ಮ ನೀರು ನಮ್ಮ ಹಕ್ಕು" ಎಂಬ ಧ್ವನಿಯೊಂದಿಗೆ ನಡೆಸಿದ ನಿರಂತರ ಹೋರಾಟದ ಫಲವಾಗಿ ಇಂದು ರೈತ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ.

ಇದೇ ಒಗ್ಗಟ್ಟನ್ನು ಮುಂದುವರಿಸಿ, ಮುಂಬರುವ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಹಾಗೂ ನ್ಯಾಯಯುತ ಬೆಲೆ ನಿಗದಿಪಡಿಸುವ ಕಾನೂನು ಜಾರಿಗಾಗಿ ಎಲ್ಲರೂ ಒಂದಾಗಿ ಹೋರಾಡೋಣ ಎಂದು ಅವರು ಕರೆ ನೀಡಿದರು.