ಕಲಬುರಗಿ

ಒನ್ ಹೆಲ್ತ್ ಪರಿಕಲ್ಪನೆ ಜತೆಗೆ ರೇಬಿಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಿಇಒ ರಾಹುಲ್ ಸಂಕನೂರ ಕರೆ

ಕಲಬುರಗಿ: ಮಾನವನ ಆರೋಗ್ಯ ಬೇರೆ, ಪ್ರಾಣಿ-ಪಕ್ಷಿಗಳ ಆರೋಗ್ಯ ಬೇರೆ ಅಥವಾ ಗಿಡ-ಮರಗಳ ಆರೋಗ್ಯ ಬೇರೆ ಅಲ್ಲ. ಎಲ್ಲದಕ್ಕೂ ಇರುವುದು ಒಂದೇ ಆರೋಗ್ಯ. (ಒನ್ ಹೆಲ್ತ್) ಪರಿಕಲ್ಪನೆಯಿಂದ ರೇಬಿಸ್ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಎಸ್ ಸಂಕನೂರ ಅವರು ಹೇಳಿದರು.

ಸೋಮವಾರ ನಗರದ ಹೊಸ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕಲಬುರಗಿ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ, ಕಲಬುರಗಿ ಘಟಕ ಇವರ ಸಂಯುಕ್ತಾಶ್ರಯದಲ್ಲಿ "ವಿಶ್ವ ರೇಬಿಸ್ ದಿನಾಚರಣೆಗೆ-2026" ಅಂಗವಾಗಿ ಜಿಲ್ಲೆಯ ಎಲ್ಲಾ ಪಶುವೈದ್ಯರಿಗೆ ಒಂದು ದಿನದ "ತಾಂತ್ರಿಕ ಸಮ್ಮೇಳನ" ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಾನವರು, ಪ್ರಾಣಿ-ಪಕ್ಷಿಗಳು ಹಾಗೂ ಪರಿಸರದ ಆರೋಗ್ಯ ಒಂದಕ್ಕೊಂದು ಬೆಸೆದುಕೊಂಡಿದ್ದು, ಒಂದರಲ್ಲಿ ಏರುಪೇರಾದರೂ ಇಡೀ ಪ್ರಕೃತಿಯ ಸಮತೋಲನ ತಪ್ಪುತ್ತದೆ. "ಪ್ರಕೃತಿ ಮತ್ತು ಪ್ರಾಣಿಗಳು ಆರೋಗ್ಯವಾಗಿದ್ದಾಗ ಮಾತ್ರ ಮಾನವ ಜನಾಂಗ ಸುರಕ್ಷಿತವಾಗಿರಲು ಸಾಧ್ಯ. ರೇಬಿಸ್ ಲಸಿಕೆಯನ್ನು ಪ್ರಥಮ ಬಾರಿಗೆ ಸಂಶೋಧಿಸಿದ ಪ್ರಸಿದ್ಧ ವಿಜ್ಞಾನಿ ಲುಯಿ ಪಶ್ಚರ್ ಅವರ ನೆನಪಿನಲ್ಲಿ 'ರೇಬಿಸ್ ತಡೆಗಟ್ಟುವಿಕೆ ಮತ್ತು ಜಾಗೃತಿ ಮೂಡಿಸುವ' 'ವಿಶ್ವ ರೇಬಿಸ್ ದಿನ'ವನ್ನು ಆಚರಿಸಲಾಗುತ್ತದೆ ಎಂದರು.

ರೇಬಿಸ್ ಕಾಯಿಲೆಯು ನಾಯಿ, ಬೆಕ್ಕು, ಅಳಿಲು ಮುಂತಾದ ಪ್ರಾಣಿಗಳ

ಕಚ್ಚುವಿಕೆಯಿಂದ ಹರಡುತ್ತದೆ. ರೇಬಿಸ್ ಶೇ. 100 ರಷ್ಟು ಮಾರಕವಾದರೂ, ಶೇ. 100 ರಷ್ಟು ತಡೆಗಟ್ಟಬಹುದಾದ ರೋಗವಾಗಿದೆ. ಸಮಯಕ್ಕೆ ಸರಿಯಾಗಿ ಆಂಟಿ-ರೇಬಿಸ್ ಲಸಿಕೆ ಪಡೆಯುವುದರಿಂದ ಜೀವ ಉಳಿಸಬಹುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಲಸಿಕೆಗಳು ಲಭ್ಯವಿದ್ದು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರೇಬಿಸ್ ಮುಕ್ತ ವಾತಾವರಣ ನಿರ್ಮಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿಶ್ವ ಡಿರೇಬಿಸ್ ದಿನಾಚರಣೆ ಪೋಸ್ಟರ್ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಬೆಳಿಗ್ಗೆ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ರೇಬೀಸ್ ಜಾಗೃತಿ ಮ್ಯಾರಥಾನ್ ಜಾಗೃತಿ ಜಾತ ನಡೆಯಿತು.

ಕಲಬುರಗಿ ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಸಂಜಯ ರೆಡ್ಡಿ ಮಾತನಾಡಿ, "ನಾವು ಇಲ್ಲದಿದ್ದರೂ ಪ್ರಾಣಿಗಳು ಬದುಕಬಲ್ಲವು, ಆದರೆ ಪ್ರಾಣಿಗಳಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನಾವು ಬೆಳಗಿನ ಹಾಲು, ಪೌಷ್ಟಿಕ ಆಹಾರ ಹಾಗೂ ದಿನನಿತ್ಯದ ಅಗತ್ಯಗಳಿಗಾಗಿ ಪ್ರಾಣಿಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚುತ್ತಿರುವ ಈ ಸಮಯದಲ್ಲಿ, ಗ್ರಾಮೀಣ ಮಟ್ಟದಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ರೇಬೀಸ್ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ತೊಡಗಿಸಿಕೊಳ್ಳುವುದು ಮುಖ್ಯ.

ಆನ್‌ಲೈನ್ ಪೋರ್ಟಲ್ ಅಥವಾ ವಿವಿಧ ಫಾರ್ಮ್ಯಾಟ್‌ಗಳಲ್ಲಿ ಮಾಹಿತಿಯನ್ನು ನಮೂದಿಸುವಾಗ 'ಆಂಥ್ರಾಕ್ಸ್' ಅಥವಾ 'ಪಿಪಿಆರ್' ನಂತಹ ರೋಗಗಳಿಂದ ಸಂಭವಿಸಿದ ಸಾವುಗಳನ್ನು ತಪ್ಪು ಮಾಹಿತಿ ನೀಡುವ ಮೂಲಕ 'ರೇಬೀಸ್' ಖಾತೆಗೆ ಸೇರಿಸದಂತೆ ತಾಲೂಕು ಮಟ್ಟದ ಎಂಐಎಸ್ (MIS) ಸಂಯೋಜಕರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿಯಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗಾಗಿ ದೊಡ್ಡ ಮಟ್ಟದ ಎಬಿಸಿ (ABC) ಸೆಂಟರ್ ಪ್ರಾರಂಭಗೊಳ್ಳುತ್ತಿದ್ದು, ಪಶುವೈದ್ಯರ ಕೊರತೆಯನ್ನು ನೀಗಿಸಲು 'ಪೇಡ್ ಸರ್ವಿಸ್' (Paid Service) ಮಾದರಿಯಲ್ಲಿ ವೈದ್ಯರ ಸೇವೆಯನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಥಿತಿಗಳಾಗಿ ಆಗಮಿಸಿದ ಕಲಬುರಗಿ ಪಶು ವೈದ್ಯಕೀಯ ತರಬೇತಿ ಕೇಂದ್ರದ ಉಪ ನಿರ್ದೇಶಕರಾದ ಡಾ. ದಯಾನಂದ ಹಕ್ಕಪಿಕ್ಕಿ ಮಾತನಾಡಿ ರೇಬಿಸ್ ಮುಕ್ತ ವಾತಾವರಣ ನಿರ್ಮಿಸಲು ಪಶುಸಂಗೋಪನೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಬೆಂಗಳೂರಿನ CARE ('ಚಾರ್ಲಿ') ಸಂಸ್ಥೆಯು ನಿರಂತರವಾಗಿ ಪ್ರತಿದಿನ 20 ರಿಂದ 30 ಶ್ವಾನಗಳಿಗೆ ಪ್ರಾಣಿ ಜನನ ನಿಯಂತ್ರಣ (ABC) ಕಾರ್ಯಕ್ರಮ ಹಾಗೂ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿರುವುದನ್ನು ಶ್ಲಾಘಿಸಿದರು.

ಪ್ರತಿಯೊಂದು ಬೀದಿಯಲ್ಲೂ 15-20 ನಾಯಿಗಳಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರೇಬಿಸ್ ತಡೆಯುವುದು ಅತ್ಯಗತ್ಯವಾಗಿದೆ. ರೈತರ ತರಬೇತಿ ಶಿಬಿರಗಳಲ್ಲಿ ರೇಬಿಸ್ ಜಾಗೃತಿ ಹಾಗೂ ಸಾವಯವ ಕೃಷಿ ಕುರಿತು ವಿಶೇಷ ಉಪನ್ಯಾಸಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ಪಶು ವೈದ್ಯಕೀಯ ಸಂಘ ಕಲಬುರಗಿ ಘಟಕದ ಅಧ್ಯಕ್ಷರಾದ ಡಾ. ಯಲ್ಲಪ್ಪ ಇಂಗಳೆ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಶೇ. ೫೦ಕ್ಕೂ ಹೆಚ್ಚು ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದಾಗ್ಯೂ ಇಲಾಖೆಯು ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಎಂದರು. ಕಳೆದ ೧೫ ದಿನಗಳಿಂದ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳು, ತಾಲೂಕು ಕೇಂದ್ರಗಳಾದ ಚಿತ್ತಾಪುರ, ಚಿಂಚೋಳಿ, ಸೇಡಂ, ಆಳಂದ ಸೇರಿದಂತೆ ವಿವಿಧೆಡೆ ಸುಮಾರು ೪೮೦ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೨೦೩೦ರ ವೇಳೆಗೆ ರೇಬೀಸ್ ಮುಕ್ತ ಸಮಾಜ ನಿರ್ಮಾಣ ಮಾಡುವ ಗುರಿಯೊಂದಿಗೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಲಬುರಗಿ ಇ.ಎಸ.ಐ.ಸಿ.ಯ ಸಹ ಪ್ರಾಧ್ಯಾಪಕರಾದ ಡಾ. ಮಾವತ್ಕರ್ ಮುನ್ನಾಜೀ ವೆಂಕಟೇಶ ಹಾಗೂ ಬಿದರ ಕೆ.ವಿ.ಎ.ಎಫ.ಎಸ.ಯು.ನ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಸಂಜೀವ ಕುಮಾರ ಟೋಪನ್ ಅವರು ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಅಭಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಸಂಗನಗೌಡ ಹೊಸಳ್ಳಿ, ಡಿ.ಎಚ್. ಓ ಶರಣಬಸಪ್ಪ ಕ್ಯಾತನಾಳ, ಕಲಬುರಗಿ ಸ್ಪೆಷಾಲಿಟಿ ಆಸ್ಪತ್ರೆಯ ಉಪ ನಿರ್ದೇಶಕ ಡಾ. ರಾಜು ದೇಶಮುಖ, ಕಲಬುರಗಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ. ಉಪ ನಿರ್ದೇಶಕ ಡಾ. ರವಿಂದ್ರ ಬುರೆ ಸೇರಿದಂತೆ ಜಿಲ್ಲೆಯ ಎಲ್ಲಾ ಪಶು ವೈದ್ಯಾಧಿಕಾರಿಗಳು, ನಿವೃತ್ತ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಡಾ. ಶಂಕರ ಎಸ ಕಣ್ಣಿ ಸ್ವಾಗತಿಸಿದರು. ಡಾ. ವಿಜಯಕುಮಾರ ವಂದಿಸಿದರು.