ಕಲಬುರಗಿ: ನಗರದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೂತನ ಕಚೇರಿಯ ಆಡಳಿತ ಕಟ್ಟಡವನ್ನು 20ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈಗ ಕಾರ್ಯನಿರ್ವಹಿಸುತ್ತಿರುವ ಕಟ್ಟಡವನ್ನು 58 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಈಗ ಶಿಥಿಲಗೊಂಡಿರುವುದರಿಂದ ನೂತನ ಆಡಳಿತ ಕಚೇರಿಯನ್ನು ನಿರ್ಮಾಣ ಮಾಡಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿರುವ ಸಚಿವರು, ಉದ್ದೇಶಿತ ಕಟ್ಟಡವು ವಾಣಿಜ್ಯ ಸಂಕೀರ್ಣವನ್ನು ಹೊಂದಲಿದೆ ಎಂದು ಹೇಳಿದ್ದಾರೆ.
ಹತ್ತಿಕುಣಿ ಕಾಲುವೆ ದುರಸ್ತಿ ಕಾಮಗಾರಿಗಳಿಗೆ ಸಚಿವ ಸಂಪುಟದ ಸಮ್ಮತಿ
ಯಾದಗಿರಿ ತಾಲ್ಲೂಕು ಮತ್ತು ಜಿಲ್ಲೆಯಲ್ಲಿರುವ ಹತ್ತಿಕುಣಿ ಕ್ಲಸ್ಟರ್ ಯೋಜನೆಯ 72 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯ ವಿನ್ಯಾಸ ವರದಿಗೆ ಸಚಿವ ಸಫುಟ ಸಭೆಯು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರ.
14 ಕಿಲೋ ಮೀಟರ್ ಉದ್ದದ ಹತ್ತಿಕುಣಿ ಜಲಾಶಯ ಯೋಜನೆಯ ಎಡದಂಡೆ ಕಾಲುವೆಯನ್ನು 1973 ರಲ್ಲಿ ನಿರ್ಮಿಸಲಾಯಿತು, ಇದು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂಡಹಳ್ಳಿ, ದಸ್ತರಾಭಾದ ಮತ್ತು ಮಂಡರಗಿಯ ಬರಪೀಡಿತ ಗ್ರಾಮಗಳಿಗೆ ಸೇರಿದ 5300 ಎಕರೆ ಕೃಷಿ ಯೋಗ್ಯ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಉದ್ದೇಶದಿಂದ ನಿರ್ಮಿಸಲಾಯಿತು. ಕಳೆದ 53 ವರ್ಷಗಳಿಂದ ಈ ಕಾಲುವೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳದೇ ಇರುವುದರಿಂದ ಕಾಲುವೆಯಲ್ಲಿ ನೀರಿನ ಹರವಿನ ಪ್ರಮಾಣ ಕುಸಿದಿರುವುದರಂದ ಹಾಗೂ ಅಲಬೂರು, ಬಾದರ್ಲಿ, ಗಿಣಿವಾರ, ಹರತನೂರು, ಮತ್ತು ವೆಂಗಲಾಪುರ ಗ್ರಾಮಗಳ ಕೊನೆಯ ರೈತರ ಭೂಮಿಗೂ ನೀರು ದೊರೆಯುವಂತಾಗಲು ಶಿಥಿಲಾವಸ್ಥೆಯಲ್ಲಿರುವ ಹತ್ತಿಕುಣಿ ಜಲಾಶಯ ಕಾಲುವೆಯ ದುರಸ್ತಿ ಕೈಗೊಳ್ಳಲಾಗುವುದೆಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಗಳನ್ನು ನೀಡಿದ್ದಾರೆ.